ಕೋಲ್ಕತ್ತ ಮೇ 05: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹೀನಾಯ ಸೋಲು ಅನುಭವಿಸಿದ್ದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸುವ ಮೂಲಕ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದ್ದಾರೆ.

ಸೋಮವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತ ಸಾಧಿಸಿದೆ. ಆದರೆ, ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ, “ಚುನಾವಣೆಯಲ್ಲಿ ಅನ್ಯಾಯ ನಡೆದಿದೆ, ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ. ಮರು ಮತ ಎಣಿಕೆ ನಡೆಯುವವರೆಗೆ ನಾನು ರಾಜಭವನಕ್ಕೆ ಹೋಗುವುದಿಲ್ಲ” ಎಂದು ಗುಡುಗಿದ್ದಾರೆ.
“ನೈತಿಕವಾಗಿ ನಾವೇ ಗೆದ್ದಿದ್ದೇವೆ. ಬಿಜೆಪಿಯ ದೌರ್ಜನ್ಯದ ವಿರುದ್ಧ ನಾನು ಬೀದಿಗಿಳಿಯುತ್ತೇನೆ” ಎಂದು ಮಮತಾ ಹೇಳಿರುವುದು ಬಂಗಾಳ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಬಿಜೆಪಿ ಈಗಾಗಲೇ ಸರ್ಕಾರ ರಚನೆಗೆ ಸಜ್ಜಾಗಿದ್ದು, ಮುಖ್ಯಮಂತ್ರಿಯವರ ಈ ನಡೆ ಸಾಂವಿಧಾನಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. “ನಾನು ಇನ್ನು ಮುಂದೆ ಬಿಜೆಪಿಯ ದೌರ್ಜನ್ಯಗಳನ್ನು ಸಹಿಸುವುದಿಲ್ಲ. ನಾನು ಬೀದಿಗಿಳಿದಿದ್ದೆ, ಬೀದಿಗಿಳಿಯುತ್ತೇನೆ. ನೈತಿಕವಾಗಿ ನಾವು ಚುನಾವಣೆಯನ್ನು ಗೆದ್ದಿದ್ದೇವೆ. ಹೀಗಾಗಿ ರಾಜೀನಾಮೆ ಕೊಡುವುದಿಲ್ಲ” ಎಂದು ಮಮತಾ ಶಪಥ ಮಾಡಿದ್ದಾರೆ.