ಮಂಗಳೂರು ನಗರಕ್ಕೆ ಇಂದಿನಿಂದ ಮೂರು ದಿನಗಳ ಕಾಲ ನೀರು ಪೂರೈಕೆ ಇಲ್ಲ

ಮಂಗಳೂರು ಮೇ 13: ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ನೀರು ಪೂರೈಕೆಯ ರೇಷನಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇಂದಿನಿಂದ ಮೂರು ದಿನ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಗಾಗಿ ಸದ್ಯ ಜಾರಿಯಲ್ಲಿರುವ ರೇಷನಿಂಗ್‌ ನಿಯಮ ಸೋಮವಾರದಿಂದ ಪರಿಷ್ಕರಿ ಸಲಾಗಿದೆ.

ಪ್ರಸ್ತುತ ನಾಲ್ಕು ದಿನ ನೀರು ಪೂರೈಕೆ, ಎರಡು ದಿನ ಸ್ಥಗಿತ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮೇ 13ರಿಂದ ನಾಲ್ಕು ದಿನ ನೀರು ಪೂರೈಕೆ ಮತ್ತು ಮೂರು ದಿನ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು.

ತುಂಬೆ ಅಣೆಕಟ್ಟಿನಲ್ಲಿ ರವಿವಾರ ಬೆಳಗ್ಗೆ ನೀರಿನ ಮಟ್ಟ 3.97ಮೀ. ಇದ್ದು ನೀರು ಸಂಜೆ ವೇಳೆಗೆ 3.94 ಮೀ. ಗೆ ಇಳಿದಿದೆ. ಶನಿವಾರ ಬೆಳಗ್ಗೆ 4.12 ಮೀ. ಇದ್ದ ನೀರಿನ ಮಟ್ಟ ಸಂಜೆ ವೇಳೆಗೆ 4 ಮೀ.ಗೆ ಇಳಿದಿತ್ತು.

ನೂತನ ರೇಷನಿಂಗ್ ವ್ಯವಸ್ಥೆ ಪ್ರಕಾರ ಇಂದಿನಿಂದ ಮೂರು ದಿನಗಳ ಕಾಲ ನೀರು ಸ್ಥಗಿತಗೊಳ್ಳಲಿದೆ. ಮೇ 16 ರಿಂದ ಮೇ 20 ರವರೆಗೆ ನೀರು ಸರಬರಾಜಾಗಲಿದೆ ಎಂದು ಮಹಾ ನಗರಪಾಲಿಕೆ ಪ್ರಕಟಣೆ ತಿಳಿಸಿದೆ.