ಮುಂಗಾರು ಮಳೆ  ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಪ್ರಾರಂಭ

ಮಂಗಳೂರು ಜೂನ್ 13: ಮಳೆ ಬರದಿದ್ದರೆ ದೇವರ ಅಭಿಷೇಕಕ್ಕೂ ನೀರಿಲ್ಲ ಎಂದು ದೇಶವ್ಯಾಪಿ ಸುದ್ದಿಯಾಗಿದ್ದ ಧರ್ಮಸ್ಥಳದಲ್ಲಿ ಇದೀಗ ಬತ್ತಿ ಹೋಗಿದ್ದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಆರಂಭಗೊಂಡಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಕೊರತೆಯಿಂದಾಗಿ ಭಾರಿ ನೀರಿನ ಅಭಾವ ಎದುರಿಸುತ್ತಿದ್ದ ಧರ್ಮಸ್ಥಳದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿಟ್ಟುಸಿರುವ ಬಿಡುವಂತಾಗಿದೆ.

ಈ ಬಾರಿಯ ಬೇಸಿಗೆಯಲ್ಲಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ನೀರಿನ ಕೊರತೆ ಹಿನ್ನಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಭಕ್ತರಿಗೆ ಸ್ನಾನಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಅಲ್ಲದೆ ದೇವರ ಅಭಿಷೇಕಕ್ಕೂ ನೀರಿನ ಸಮಸ್ಯೆ ಬರಬಹುದು ಎಂದು ಹೇಳಲಾಗಿತ್ತು. ಸ್ವತಹ ಹೆಗ್ಗಡೆಯವರು 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ.

ಈಗ ಅಭಿಷೇಕಕ್ಕೆ ನೇತ್ರಾವತಿಯಲ್ಲಿ ತಾತ್ಕಾಲಿಕವಾಗಿ ನೀರಿದೆ. ಅದು ನೇತ್ರಾವತಿ ಕಿಂಡಿ ಅಣೆಕಟ್ಟಿನಲ್ಲಿ ತಾತ್ಕಾಲಿಕ ನೀರು ಹಾಗೂ ತೀರ್ಥದ ಗುಂಡಿಯಲ್ಲಿ ಸ್ವಲ್ಪ ನೀರಿದೆ. ಮುಂದೆ ಮಳೆ ಬರದಿದ್ದರೆ ಮಂಜುನಾಥನಿಗೂ ಬರದ ಬಿಸಿ ತಟ್ಟಲಿದೆ. ಅಲ್ಲಿನ ತೀರ್ಥ ಗುಂಡಿಯಲ್ಲೂ ನಾಲ್ಕು ಅಡಿ ನೀರು ಕಡಿಮೆ ಆಗಿದೆ. ಹಿಂದೆಯೂ ಈ ರೀತಿ ಆಗಿದೆ. ಆದರೆ ಇಷ್ಟು ತೀವ್ರವಾಗಿ ಆಗಿರಲಿಲ್ಲ. ಉಪನದಿಗಳಲ್ಲಿ ನೀರು ಬತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ಆಗಿದೆ ಎಂದು ತಿಳಿಸಿದ್ದರು.

ನೇತ್ರಾವತಿ ನದಿಯಲ್ಲಿ ನೀರಿನ ಅಭಾವ ಹಿನ್ನಲೆಯಲ್ಲಿ ಕ್ಷೇತ್ರದ ವತಿಯಿಂದ ಭಕ್ತಾಧಿಗಳು ನೀರಿನ ಸಮಸ್ಯೆ ನೀಗುವ ತನಕ ಕ್ಷೇತ್ರಕ್ಕೆ ಭೇಟಿ ನೀಡದಂತೆ ವಿನಂತಿಸಲಾಗಿತ್ತು.

ಅಲ್ಲದೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಕೂಡ ಸರಕಾರಕ್ಕೆ ಮನವಿ ಸಲ್ಲಿಸಿ ನೀರಿನ ಸಮಸ್ಯೆ ನಿವಾರಿಸಲು ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಮನವಿ ಮಾಡಿದ್ದರು.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೇತ್ರಾವತಿ ಹಾಗೂ ಅದರ ಉಪನದಿಗಳಲ್ಲಿ ನೀರಿನ ಹರಿವು ಪ್ರಾರಂಭವಾಗಿದೆ. ಇದೀಗ ಮತ್ತೆ ನೇತ್ರಾವತಿ ಒಡಲು ತುಂಬಿದ್ದು , ಧರ್ಮಸ್ಥಳದ ಸ್ನಾನಘಟ್ಟದಲ್ಲೂ ನೀರಿನ ಹರಿವು ಪ್ರಾರಂಭವಾಗಿದೆ. ಭಕ್ತಾಧಿಗಳಲ್ಲಿ ಸಂತಸ ಮೂಡಿಸಿದೆ.

Facebook Comments

comments