ಬೆಳ್ತಂಗಡಿ,ಮಾರ್ಚ್ 25: ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ವಾರಂಟ್ ಆರೋಪಿಯನ್ನು ವೇಣೂರು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಉಡುಪಿ ಮೂಲದ ಮಣಿಕಂಠ (35) ಬಂಧಿತ ಆರೋಪಿ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾಪು ನಿವಾಸಿ ಮಣಿಕಂಠನ ವಿರುದ್ಧ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು. ಕಳೆದ ಐದು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈತನನ್ನು, ಖಚಿತ ಮಾಹಿತಿ ಆಧರಿಸಿ ವೇಣೂರು ಪೊಲೀಸ್ ಅಧಿಕಾರಿಗಳು ಉಡುಪಿಯಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಪೊಲೀಸರು ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದೆ.