ಕಲಬುರಗಿ , ಏಪ್ರಿಲ್ 26: ಬಡತನವು ಪ್ರತಿಭೆಗೆ ಎಂದಿಗೂ ಅಡ್ಡಿಯಾಗದು ಎಂಬುದನ್ನು ಕಲಬುರಗಿ ಜಿಲ್ಲೆಯ ಹೆಣ್ಣುಮಗಳೊಬ್ಬಳು ಸಾಬೀತುಪಡಿಸಿದ್ದಾಳೆ. ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಭಿಕ್ಷೆ ಬೇಡುತ್ತಲೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ. 84.64 ರಷ್ಟು ಅಂಕ ಗಳಿಸುವ ಮೂಲಕ ಅಲೆಮಾರಿ ಸಮುದಾಯದ ಸುಜಾತಾ ಭೀಮಶಾ ಗೊಲ್ಲರ ಈಗ ರಾಜ್ಯದಾದ್ಯಂತ ಸುದ್ದಿಯಾಗಿದ್ದಾಳೆ.

ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಸುಜಾತಾ, ಅಲೆಮಾರಿ ಗೊಲ್ಲರ ಸಮುದಾಯಕ್ಕೆ ಸೇರಿದವರು. ಅಕ್ಷರ ಜ್ಞಾನವಿಲ್ಲದ ಕುಟುಂಬದಿಂದ ಬಂದ ಇವರು, ಜೀವನ ನಿರ್ವಹಣೆಗಾಗಿ ಪ್ರತಿದಿನ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದರು. ಒಂದು ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದರೂ, ಮನಸ್ಸಿನಲ್ಲಿ ಮಾತ್ರ ಸಾಧನೆಯ ಛಲವಿತ್ತು.
ಇತ್ತೀಚೆಗೆ ಪ್ರಕಟಗೊಂಡ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಸುಜಾತಾ 625 ಅಂಕಗಳಿಗೆ 529 (ಶೇ. 84.64) ಅಂಕಗಳನ್ನು ಪಡೆಯುವ ಮೂಲಕ ತನ್ನೆಲ್ಲಾ ಕಷ್ಟಗಳಿಗೆ ವಿದ್ಯಾಭ್ಯಾಸದ ಮೂಲಕ ಉತ್ತರ ನೀಡಿದ್ದಾಳೆ. ಸರ್ಕಾರಿ ಶಾಲೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಅಲೆಮಾರಿ ಬದುಕಿನ ಸಂಕಷ್ಟಗಳ ನಡುವೆಯೂ ಈಕೆ ತೋರಿದ ಶಿಸ್ತು ಮತ್ತು ಪರಿಶ್ರಮಕ್ಕೆ ಶಿಕ್ಷಕ ವೃಂದ ಬೆರಗಾಗಿದೆ.
ಸುಜಾತಾಳ ಈ ಸಾಹಸಗಾಥೆಯನ್ನು ಗುರುತಿಸಿದ ಸ್ಥಳೀಯ ‘ಶಿಕ್ಷಣಪ್ರೇಮಿ ಬಳಗ’ದ ಸದಸ್ಯರು ಆಕೆಯ ಮನೆಗೆ ಭೇಟಿ ನೀಡಿ ಸನ್ಮಾನಿಸಿದ್ದಾರೆ. “ಬಡತನದ ಕತ್ತಲಲ್ಲಿ ಅರಳಿದ ಈ ಪ್ರತಿಭೆಗೆ ನಾವೆಲ್ಲರೂ ಆಸರೆಯಾಗಬೇಕು. ಸುಜಾತಾಳ ಮುಂದಿನ ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು,” ಎಂದು ಬಳಗದ ಸದಸ್ಯರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.