ರಾಯಚೂರು, ಮಾರ್ಚ್ 20 : ರಾಯಚೂರಿನ ಸಿಂಧನೂರು ತಾಲೂಕಿನ ಬಸ್ಸಾಪುರ (ಇಜೆ) ಗ್ರಾಮದಲ್ಲಿ ಜಗದ್ಗುರು ಶಿವಾನಂದ ಮಠ ಸ್ವಾಮೀಜಿ ದೇವೇಂದ್ರಪ್ಪ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಳ್ಳೂರು (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದ ದೇವೇಂದ್ರಪ್ಪ ಅವರು ಜೀವನದಲ್ಲಿ ವೈರಾಗ್ಯ ಮೂಡಿ ಮಠ ಕಟ್ಟಿಕೊಂಡಿದ್ದರು. ಶಾಲಾ ಅವಧಿ ಬಳಿಕ ಸಂಜೆ ಮಠದಲ್ಲಿ ಧಾರ್ಮಿಕ ಪ್ರವಚನ ಮಾಡುತ್ತಿದ್ದರು. ಮೂಲತಃ ಗದಗದ ಗಜೇಂದ್ರಗಡದ ಗುಳಗುಳಿ ಗ್ರಾಮದವರಾದ ದೇವೇಂದ್ರಪ್ಪ ಸ್ವಾಮಿಯವರು ಕಳೆದ 20 ವರ್ಷದಿಂದ ಸಿಂಧನೂರು ತಾಲೂಕಿನಲ್ಲಿ ಶಿಕ್ಷಕನಾಗಿ ಸೇವೆಸಲ್ಲಿಸುತ್ತಿದ್ದರು. ಕುಟುಂಬದಿಂದ ದೂರ ಉಳಿದಿದ್ದ ದೇವೇಂದ್ರಪ್ಪ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.