Connect with us

    LATEST NEWS

    ಮತದಾನ ಜಾಗೃತಿ ಮೂಡಿಸುತ್ತಿರುವ ಮದುವೆ ಆಮಂತ್ರಣ ಪತ್ರಿಕೆ

    ಮತದಾನ ಜಾಗೃತಿ ಮೂಡಿಸುತ್ತಿರುವ ಮದುವೆ ಆಮಂತ್ರಣ ಪತ್ರಿಕೆ

    ಉಡುಪಿ ಏಪ್ರಿಲ್ 8: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿರಬಹುದು, ನಾಮ ಸಂವತ್ಸರ , ವಧೂ ವರರ ಹೆಸರು, ಮದುವೆ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎಂಬ ಸಂದೇಶ..

    ಆದರೆ ಇಲ್ಲೋಂದು ವಿನೂತನ ವಿವಾಹ ಆಮಂತ್ರಣ ಪತ್ರಿಕೆ ಇದೆ, ಇದು 2019 ರ ಲೋಕಸಭಾ ಚುನಾವಣೆಯ ಮಹತ್ವವನ್ನು ಸಾರುತ್ತಿದೆ, ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಮಾಡಿ, ಪ್ರಜಾಪ್ರಭುತ್ವ ಗೆಲ್ಲಿಸಿ, ನಾವು ಮಾರಾಟಕ್ಕಿಲ್ಲ ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಸಂದೇಶ ಎಲ್ಲ ಬಂಧು ಬಳಗವನ್ನು ತಲುಪುತ್ತಿದೆ.

    ಮೇ 1 ರಂದು ತಲ್ಲೂರು ಪಾರ್ತಿಕಟ್ಟೆ ಶ್ರೀ ಶೇಷಕೃಷ್ಣ ಕನ್ವೆಷನ್ ಸಭಾಭವನದಲ್ಲಿ ನಡೆಯುವ ಗೌರಿ ಶ್ರೀನಿವಾಸ್ ಇವರ ಪುತ್ರ ಗಣೇಶ್ ಕುಮಾರ್ ಪಡುಕೋಣೆ ಮತ್ತು ಲೀಲಾವತಿ ನಾರಾಯಣ ಅವರ ಪುತ್ರಿ ಪೂರ್ಣಿಮಾ ಅವರ ವಿವಾಹ ಆಮಂತ್ರಣ ಪತ್ರಿಕೆಯು ಈ ಜಾಗೃತಿ ಸಂದೇಶ ಹೊಂದಿದೆ.

    ಅಷ್ಟೇ ಅಲ್ಲ, ವಿವಾಹ ಪತ್ರಿಕೆಯಲ್ಲಿ ಆಶೀರ್ವಾದವೇ ಉಡುಗೊರೆ ಎಂದು ಇದೆ , ಮದುವೆಗೆ ಬಂದವರು ವಧೂ ವರರಿಗೆ ಯಾವುದೇ ಉಡುಗೊರೆ ನೀಡುವಂತಿಲ್ಲ, ಆದರೆ ಮದುವೆಗೆ ಬಂದವರಿಗೆ ವಿಶೇಷ ಕೊಡುಗೆ ನೀಡಲಾಗುತ್ತಿದೆ.. ಅದು ಎಲ್ಲರಿಗೂ ಅಲ್ಲ, ಒಂಚೂರು ಇಲ್ಕಾಣಿ ಎಂಬ ಕುಂದಾಪ್ರ ಕನ್ನಡದ ಒಕ್ಕಣೆಯಲ್ಲಿ, ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ವಿಶೇಷ ಕೊಡುಗೆ ನೀಡಲಾಗುತ್ತಿದೆ.

    ಅದೂ ಮತದಾನ ಮಾಡಿದ ಬಗ್ಗೆ ಬೆರಳಿನ ಶಾಹಿ ಗುರುತು ತೋರಿಸಿದವರಿಗೆ ಮಾತ್ರ, ಅಂತಹವರಿಗೆ 250 ರೂ ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

    ಅಲ್ಲದೇ ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವ್ಯಂಗ್ಯಚಿತ್ರ ಪ್ರದರ್ಶನ, ಪುರಾತನ ಜಾನಪದ ವಸ್ತುಗಳ ಪ್ರದರ್ಶನ ಸಹ ಇರಲಿದೆ..

    ವಿವಾಹ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿ, ಆಮಂತ್ರಣ ಪತ್ರಿಕೆಗೆ ದುಬಾರಿ ವೆಚ್ಚ ಮಾಡುವ ಕಾಲದಲ್ಲಿ, ಸಮಾಜಕ್ಕೆ ಮತದಾನ ಜಾಗೃತಿಯ ಸಂದೇಶದ ಜೊತೆಗೆ ಪುಸ್ತಕ ಓದುವುದನ್ನು ಪ್ರೋತ್ಸಾಹಿಸಿ, ಅತ್ಯಂತ ಅರ್ಥಪೂರ್ಣವಾಗಿ ವಿವಾಹವಾಗುತ್ತಿರುವ ಈ ಜೋಡಿ ಎಲ್ಲರಿಗೂ ಮಾದರಿಯಾಗಿದೆ.

    ಜಿಲ್ಲಾಡಳಿತಗಳು, ಜಿಲ್ಲಾ ಸ್ವೀಪ್ ಸಮಿತಿಗಳು ಕೈಗೊಳ್ಳುತ್ತಿರುವ ಮತದಾನ ಜಾಗೃತಿ ಕಾರ್ಯಕ್ರಮಗಳೊಂದಿಗೆ ಇದೊಂದು ಅಪರೂಪದ ಮಾದರಿ ಜಾಗೃತಿ ಕಾರ್ಯಕ್ರಮವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply