ವಿಟ್ಲ ಡಿಸೆಂಬರ್ 21: ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಕಜಂಬು ಉತ್ಸವದ ಬಳಿಕ ವರ್ಷಂಪ್ರತಿ ನಡೆಯುವ ಕೋಳಿ ಅಂಕಕ್ಕೆ ಮತ್ತೆ ಇಂದು ಪೊಲೀಸರು ದಾಳಿ ನಡೆಸಿ, 20 ಕೋಳಿ ಸೀಜ್ ಮಾಡಿ 27 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಬೆಳಗ್ಗೆ ಬಿಜೆಪಿ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನಕ್ಕೆ ಆಗಮಿಸಿ ಗದ್ದೆಯಲ್ಲಿ ಕೋಳಿ ಅಂಕ ಆರಂಭಿಸಲು ಪ್ರೇರೇಪಿಸಿದರು. ಬಹಳ ಹಿಂದಿನಿಂದಲೇ ಕೇಪು ಕ್ಷೇತ್ರದಲ್ಲಿ ಕಜಂಬು ಉತ್ಸವ ಬಳಿಕ ಮೂರು ದಿನಗಳ ಕೋಳಿ ಅಂಕ ನಡೆಯುತ್ತ ಬಂದಿದೆ. ಇದು ಜೂಜಾಟವಲ್ಲ. ನಂಬಿಕೆ. ಆದುದರಿಂದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಈ ಕೋಳಿ ಅಂಕ ನಡೆಸುವುದು ತಪ್ಪಲ್ಲ ಎಂದರು. ಸ್ವಲ್ಪ ಹೊತ್ತಿನ ಬಳಿಕ ಪೊಲೀಸರು ಧಾಳಿ ನಡೆಸಿ ಸ್ಥಳದಲ್ಲಿ ಹಾಜರಿದ್ದ ಸಂಜೀವ ಮಠಂದೂರು, ಮುರಳೀಧರ ರೈ , ಸತೀಶ ಕುಂಪಲ, ದಯಾನಂದ ಉಜಿರೆಮಾರು, ಹರಿಪ್ರಸಾದ್ ಯಾದವ್, ಅಶೋಕ ಶೆಟ್ಟಿ ವಿಟ್ಲ , ರಾಜೇಶ್ ಬಾಳೆಕಲ್ಲು ಜೊತೆಗೆ 20 ಜನರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 20 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿ (ಬಾಲು)ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಸದ್ರಿ ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದವರು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 191/2025, ಕಲಂ: 189(2), 49, 221, 223, 190 BNS 2023 ಮತ್ತು 3, 11 PREVENTION OF CRUELTY TO ANIMALS ACT ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



