Connect with us

    LATEST NEWS

    ವಿಟ್ಲ: ಸರ್ಕಾರಿ ವೈದ್ಯರ ನಕಲಿ ಸಹಿ ಬಳಸಿ ವಂಚನೆ-ಆರೋಪಿ ಬಂಧನ

    ಬಂಟ್ವಾಳ, ಜೂನ್ 16: ಸರಕಾರಿ ವೈದ್ಯರೋರ್ವರ ನಕಲಿ ಸಹಿ ಹಾಗೂ ಸೀಲ್ ಬಳಸಿ ಸರಕಾರಕ್ಕೆ ವಂಚಿಸಲು ಪ್ರಯತ್ನಿಸಿದ ಆರೋಪಿ ಜೈಲು ಪಾಲಾದ ಪ್ರಕರಣ ಬಂಟ್ವಾಳದ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ವಿಟ್ಲ ಶಾಲಾ ರಸ್ತೆ ನಿವಾಸಿ ಶೇಖ್ ಫಿರೋಜ್ ಆದಂ (26) ಬಂಧಿತ ಆರೋಪಿ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ವೇದಾವತಿ ಅವರು ನೀಡಿದ ದೂರಿನ ಮೇಲೆ ಶೇಖ್ ಫಿರೋಜ್ ಆದಂನನ್ನು ಬಂಧಿಸಲಾಗಿದೆ. ಆರೋಪಿ ಫಿರೋಜ್ ಆದಂ ವಿಟ್ಲ ಪೋಲಿಸ್ ಠಾಣೆಯ ಮುಂಭಾಗದಲ್ಲಿ ಇರುವಂತಹ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ಮಾಲಕ ಅಬ್ದುಲ್ ಖಾದರ್ ಅವರ ಮಗನಾಗಿದ್ದು ಗ್ರಾಹಕನೋರ್ವನ ಪಿಟ್‌ನೆಸ್‌ಗಾಗಿ ವೈದ್ಯರ ನಕಲಿ ಸಹಿ ಬಳಸಿದ್ದಾನೆ ಎಂಬ ಆರೋಪದಲ್ಲಿ ಪೋಲೀಸರು ಬಂಧಿಸಿ‌ದ್ದಾರೆ.

    ಇಸುಬು ಎಂಬ ಗ್ರಾಹಕರೋರ್ವರು ಲೈಸೆನ್ಸ್ ಮರುನವೀಕರಣ ಮಾಡಲು ನ್ಯಾಷನಲ್ ಡ್ರೈವಿಂಗ್ ಸ್ಕೂಲ್‌ಗೆ ಅರ್ಜಿ ಸಲ್ಲಿಸಿದರು. ಆದರೆ ಲೈಸೆನ್ಸ್ ಮರುನವೀಕರಣಕ್ಕೆ ವೈದ್ಯರ ಪಿಟ್ ನೆಸ್ ಸರ್ಟಿಫಿಕೇಟ್ ಪಡೆಯಬೇಕು ಎಂಬುದು‌ ಇಲಾಖೆಯ ನಿಯಮವಿದೆ. ಆದರೆ ಆರೋಪಿಯು ವೈದ್ಯರ ಸಹಿ ಹಾಗೂ‌ ಸೀಲ್ ನಕಲಿ ಮಾಡಿ ಲೈಸೆನ್ಸ್ ನವೀಕರಣ ಮಾಡಲು ಮೆಲ್ಕಾರ್ ಆರ್.ಟಿ.ಒ ಕಚೇರಿಗೆ ಕಳುಹಿಸಿಕೊಟ್ಟಿದ್ದರು.

    ಆರ್.ಟಿ.ಒ ನಲ್ಲಿ ವೈದ್ಯರ ಸಹಿ ಹಾಗೂ ಪಿಟ್‌ನೆಸ್ ಅರ್ಜಿಯಲ್ಲಿರುವ ವೈದ್ಯರ ಸಹಿ ತಾಳೆ ಮಾಡಿದಾಗ ವ್ಯತ್ಯಾಸ ಗಳು ಕಂಡು ಬಂದಾಗ ಆರ್.ಟಿ.ಒ. ಇನ್ಸ್ ಪೆಕ್ಟರ್ ಅವರು ವಿಟ್ಲ ವೈದ್ಯಾಧಿಕಾರಿಯಾದ ಡಾ. ವೇದಾವತಿ ಅವರಿಗೆ ಪರಿಶೀಲನೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಆರೋಗ್ಯ ಅಧಿಕಾರಿ ಅದನ್ನು ‌ಪರಿಶೀಲಿಸಿದಾಗ ನಕಲಿ ಸಹಿ ಹಾಕಿದ ಬಗ್ಗೆ ಗಮನಕ್ಕೆ ಬಂದು ಇದರ ತನಿಖೆಗಾಗಿ ವಿಟ್ಲ ಪೋಲಿಸರಿಗೆ ದೂರು ನೀಡಿದ್ದರು.

    ಈ ದೂರಿನ ಮೇಲೆ ಕಾರ್ಯಚರಣೆ ಮಾಡಿದ ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಎಚ್ ಅವರು ಆರಂಭದಲ್ಲಿ ಲೈಸೆನ್ಸ್ ನವೀಕರಣ ಮಾಡಲು ಅರ್ಜಿ ನೀಡಿದ ಇಸುಬು ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತ ನ್ಯಾಷನಲ್ ಡ್ರೈವಿಂಗ್ ಸ್ಕೂಲ್‌ನಲ್ಲಿ ಅರ್ಜಿ ನೀಡಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಈತನ ಮಾಹಿತಿ ಮೇಲೆ ಫಿರೋಜ್ ಆದಂ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಸತ್ಯ ಸಂಗತಿ ಬಯಲಾಗಿದೆ. ಈ ಆರೋಪದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply