Connect with us

LATEST NEWS

ಕ್ರಿಸ್ ಗೇಲ್ ದಾಖಲೆ ಮುರಿದು ಶತಕಗಳ ಸರದಾರನಾದ ವಿರಾಟ್ ಕೊಹ್ಲಿ

ಬೆಂಗಳೂರು, ಮೇ 22: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ತಮ್ಮ 7ನೇ ಶತಕ ದಾಖಲಿಸುವ ಮೂಲಕ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಅವರ ಹಲವು ವರ್ಷಗಳ ದಾಖಲೆಯನ್ನು ಮುರಿದು ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಭಾನುವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ಬರೆದಿದ್ದಾರೆ. 61 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಿತ 101 ರನ್ ಸಿಡಿಸಿದ ಕೊಹ್ಲಿ, ಪ್ರಸ್ತುತ ಟೂರ್ನಿಯ ಸತತ ಎರಡನೇ ಶತಕ ಪೂರೈಸಿದರು. ಸನ್‌ರೈಸರ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲೂ ಕೊಹ್ಲಿ ಸೆಂಚುರಿ ಮಾಡಿದ್ದರು.

ಗೇಲ್ ಐಪಿಎಲ್‌ನಲ್ಲಿ ಒಟ್ಟು 6 ಶತಕ ಸಿಡಿಸಿದ್ದಾರೆ. 2018ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದಾಗ ಗಳಿಸಿದ್ದೇ ಅವರ ಕೊನೆಯ ಶತಕವಾಗಿತ್ತು. ಇದೀಗ, ಕೊಹ್ಲಿ 7ನೇ ಶತಕ ಗಳಿಸುವ ಮೂಲಕ ಅವರ ದಾಖಲೆ ಮುರಿದಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಿರುವ ಜೋಸ್ ಬಟ್ಲರ್ ಐದು ಶತಕಗಳೊಂದಿಗೆ ಐಪಿಎಲ್‌ನಲ್ಲಿ ಅತ್ಯಧಿಕ ಶತಕ ಸಿಡಿಸಿದವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

2019ರಲ್ಲಿ ಕೋಲ್ಕತ್ತ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತಮ್ಮ ಆರನೇ ಶತಕ ದಾಖಲಿಸಿದ್ದರು. ಇದಾದ, 4 ವರ್ಷಗಳ ಬಳಿಕ ಮೂರಂಕಿ ದಾಟಿದ್ದಾರೆ. ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಗುಜರಾತ್ ಟೈಟನ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಸೋತ ಆರ್‌ಸಿಬಿ ಪ್ಲೇಆಫ್ಸ್ ಅವಕಾಶ ಕಳೆದುಕೊಂಡಿತು.

Advertisement
Click to comment

You must be logged in to post a comment Login

Leave a Reply