ತಿರುವನಂತಪುರಂ ಮಾರ್ಚ್ 11: ಕುಂಭಮೇಳದ ವೇಳೆ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ, ತಮ್ಮ ಗೆಳೆಯ ಮೊಹಮ್ಮದ್ ಫರ್ಮಾನ್ ಖಾನ್ ಜೊತೆ ಕೇರಳಕ್ಕೆ ಆಗಮಿಸಿದ್ದಾರೆ. ಕುಟುಂಬದವರಿಂದ ಪ್ರಾಣಭೀತಿ ವ್ಯಕ್ತಪಡಿಸಿರುವ ಈ ಜೋಡಿ, ತಿರುವನಂತಪುರಂನ ಥಂಪನೂರು ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಿದ್ದಾರೆ.

ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಹಾಗೂ ಮಹಾರಾಷ್ಟ್ರದ ಫರ್ಮಾನ್ ಖಾನ್ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಫೇಸ್ಬುಕ್ ಮೂಲಕ ಇವರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಆದರೆ, ಇಬ್ಬರ ಧರ್ಮಗಳು ಬೇರೆಯಾಗಿದ್ದರಿಂದ ಕುಟುಂಬ ಸದಸ್ಯರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಮೊನಾಲಿಸಾ ಅವರಿಗೆ ಬೇರೊಬ್ಬರ ಜೊತೆ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು ಎನ್ನಲಾಗಿದೆ.

ತಮ್ಮ ಪ್ರೀತಿಗೆ ಅನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಬಹುದು ಮತ್ತು ತಮಗೆ ಅಪಾಯವಿರಬಹುದು ಎಂದು ಭಾವಿಸಿದ ಈ ಜೋಡಿ, ಸುರಕ್ಷಿತ ತಾಣವಾಗಿ ಕೇರಳವನ್ನು ಆರಿಸಿಕೊಂಡಿದ್ದಾರೆ. “ನಮ್ಮ ಸಂಬಂಧಕ್ಕೆ ಬೇರೆ ರಾಜ್ಯಗಳಲ್ಲಿ ದೊಡ್ಡ ವಿರೋಧ ಎದುರಾಗಬಹುದು ಎಂದು ನಮಗೆ ತಿಳಿದಿತ್ತು, ಹಾಗಾಗಿ ನಾವು ಕೇರಳಕ್ಕೆ ಬಂದೆವು” ಎಂದು ಜೋಡಿ ತಿಳಿಸಿದ್ದಾರೆ.
ಮೊನಾಲಿಸಾ ಕೇರಳದಲ್ಲಿ ಮಲೆಯಾಳಂ ಸಿನೆಮಾ ಒಂದರ ಶೂಟಿಂಗ್ ನಲ್ಲಿದ್ದಾರೆ, ಈ ನಡುವೆ ಆಕೆಯ ತಂದೆ ಕೇರಳಕ್ಕ ಆಗಮಿಸಿದ್ದರು, ಈ ಹಿನ್ನಲೆ ಕೇರಳದ ಥಂಪನೂರು ಪೊಲೀಸ್ ಠಾಣೆಗೆ ಮೊನಾಲಿಸಾ ತೆರಳಿ ರಕ್ಷಣೆ ಕೋರಿದ್ದಾರೆ. ಈ ಹಿನ್ನಲೆ ಪೊಲೀಸರು ಆಕೆಯ ತಂದೆ ಜೈ ಸಿಂಗ್ ಭೋಸ್ಲೆ ಮತ್ತು ಚಿತ್ರತಂಡವನ್ನು ಠಾಣೆಗೆ ಕರೆಸಿದರು. ಈ ವೇಳೆ ತಾನು ಫರ್ಮಾನ್ ಜೊತೆಯೇ ವಾಸಿಸಲು ಬಯಸುವುದಾಗಿ ಮೊನಾಲಿಸಾ ಪೊಲೀಸರ ಮುಂದೆ ಕಡಾಖಂಡಿತವಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.