ತಿರುವನಂತಪುರಂ ಮಾರ್ಚ್ 11: 2025ರ ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಣಿ ಮಾರಾಟ ಮಾಡುವ ವಿಡಿಯೋ ಮೂಲಕ ಇಂಟರ್ನೆಟ್ ನಲ್ಲಿ ಸೆನ್ಸೇಶನ್ ಸೃಷ್ಠಿಸಿದ್ದ ಇಂದೋರ್ ಮೂಲದ ಮೊನಾಲಿಸಾ ಭೋಸ್ಲೆ, ಕೇರಳದಲ್ಲಿ ತಮ್ಮ ಪ್ರೇಮಿ ಫರ್ಮಾನ್ ಖಾನ್ ಅವರನ್ನು ಬುಧವಾರ (ಮಾರ್ಚ್ 11) ವಿವಾಹವಾಗಿದ್ದಾರೆ. ಅಂತರ್ಧರ್ಮೀಯ ವಿವಾಹಕ್ಕೆ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಜೋಡಿ ಕೇರಳಕ್ಕೆ ಪಲಾಯನ ಮಾಡಿತ್ತು.

ತಮ್ಮ ಸಂಬಂಧಕ್ಕೆ ಜೀವ ಬೆದರಿಕೆ ಇರಬಹುದು ಎಂದು ಹೆದರಿದ ದಂಪತಿಗಳು ತಿರುವನಂತಪುರದ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾದರು. ನಂತರ ರಕ್ಷಣೆ ಕೋರಿ ಥಂಪನೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾರೆ. ತಮ್ಮ ತವರು ರಾಜ್ಯದಲ್ಲಿ ವಿರೋಧ ಎದುರಾಗಬಹುದು ಎಂಬ ಆತಂಕದಿಂದ ಸುರಕ್ಷಿತ ತಾಣವಾಗಿ ಕೇರಳವನ್ನು ಆರಿಸಿಕೊಂಡಿದ್ದಾಗಿ ದಂಪತಿಗಳು ತಿಳಿಸಿದ್ದಾರೆ.
ಈ ವಿವಾಹವು ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಸಿಪಿಐ(ಎಂ) ನಾಯಕರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಜೋಡಿಗೆ ಬೆಂಬಲ ಸೂಚಿಸಿದರು.

ಈಿ ವೇಳೆ ಮಾತನಾಡಿದ ಕೇರಳದ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ “ನಮ್ಮ ಭೂಮಿ ಜಾತ್ಯತೀತ ಮೌಲ್ಯಗಳು ಮತ್ತು ಮಾನವೀಯತೆಗೆ ಹೆಸರುವಾಸಿಯಾಗಿದೆ. ಇಂತಹ ಒಕ್ಕೂಟಗಳು ಕೇರಳದಲ್ಲಿ ಮಾತ್ರ ಸಾಧ್ಯ,” ಎಂದು ಶ್ಲಾಘಿಸಿದರು. ಎಂ.ವಿ. ಗೋವಿಂದನ್ (ಸಿಪಿಐ-ಎಂ ರಾಜ್ಯ ಕಾರ್ಯದರ್ಶಿ): ಈ ವಿವಾಹವನ್ನು “ನಿಜವಾದ ಕೇರಳ ಕಥೆ” (Real Kerala Story) ಎಂದು ಬಣ್ಣಿಸುವ ಮೂಲಕ ವಿವಾದಾತ್ಮಕ ಚಲನಚಿತ್ರಗಳಿಗೆ ಟಾಂಗ್ ನೀಡಿದರು.
ಸಂಬಂಧಿ ಜೊತೆ ಮದುವೆ ಮಾಡಿಕೊಳ್ಳುವಂತೆ ತಂದೆ ಒತ್ತಾಯ ಹೇರಿದ್ದರು. ಇದಕ್ಕೆ ಮೊನಾಲಿಸಾ ನಿರಾಕರಿಸಿದ್ದಳು. ಪ್ರಿಯಕರನ ಜೊತೆ ಠಾಣೆಗೆ ಬಂದು ದೂರು ನೀಡಿದ್ದಳು. ದೂರಿನ ಹಿನ್ನೆಲೆಯಲ್ಲಿ ಮೊನಾಲಿಸಾ ತಂದೆ ಜೈಸಿಂಗ್ ಭೋಂಸ್ಲೆಯನ್ನು ತಂಬಾನೂರು ಠಾಣೆಗೆ ಪೊಲೀಸರು ಕರೆಸಿದ್ದರು. ಯಾರ ಜೊತೆ ಜೀವನ ಮಾಡಬೇಕು ಅನ್ನೋದನ್ನು ನಿರ್ಧರಿಸುವ ಹಕ್ಕು ಮೊನಾಲಿಸಾಗಿದೆ ಎಂದು ತಂದೆಗೆ ಪೊಲೀಸರು ಮನವರಿಕೆ ಮಾಡಿದರು. ಬಳಿಕ ಪ್ರಿಯಕರನ ಜೊತೆ ಹೋಗಲು ಮೊನಾಲಿಸಾಗೆ ಅನುಮತಿ ಕೊಟ್ಟರು. ಈ ಹಿನ್ನೆಲೆಯಲ್ಲಿ ಸಂಜೆ ದೇವಸ್ಥಾನದಲ್ಲಿ ಮದುವೆಯಾಗಿದೆ.