ಖಾತೆ ಬದಲಾವಣೆಗೆ ಲಂಚ ಸ್ವೀಕರಿಸಿದ್ದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಪುತ್ತೂರು ಅಕ್ಟೋಬರ್ 10: ಖಾತೆ ಬದಲಾವಣೆಗೆ ಲಂಚ ಸ್ವೀಕಾರ ಮಾಡುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ.ರಾಮಕುಂಜದ ವಿ.ಎ ದುರ್ಗಪ್ಪ ಅವರೇ ಎಸಿಬಿ ಬಲೆಗೆ ಬಿದ್ದ ಭೂಪನಾಗಿದ್ದಾನೆ. ಖಾತೆ ಬದಲಾವಣೆ ಸಂಬಂಧ ಲಂಚ ಪಡೆಯುತ್ತಿದ್ದಾಗ ಭ್ರಷ್ಟಚಾರ ನಿಗ್ರಹನ ದಳದ ಅಧಿಕಾರಿಗಳು ರೆಡ್‌ ಹ್ಯಾಂಡಾಗಿ ಬಂಧಿಸಿದ್ದಾರೆ.

ಖಾತೆ ಬದಲಾವಣೆಗಾಗಿ ಫೆಬ್ರುವರಿ 20ರಂದು ಶರತ್‌ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆಗಾಗಿ ಸೆಪ್ಟೆಂಬರ್ 12ರಂದು ಅರ್ಜಿದಾರರಿಗೆ ನೋಟಿಸ್ ನೀಡಲಾಗಿತ್ತು. ಅಲ್ಲದೇ, ಲಂಚವಾಗಿ 20 ಸಾವಿರ ನೀಡುವಂತೆ ವಿಎ ದುರ್ಗಪ್ಪ ಬೇಡಿಕೆ ಇಟ್ಟಿದ್ದನು. ಈ ಪೈಕಿ 5 ಸಾವಿರ ನೀಡಲಾಗಿತ್ತು. ಆದರೆ, ಮತ್ತೆ ಹಣಕ್ಕಾಗಿ ದುರ್ಗಪ್ಪ ಬೇಡಿಕೆ ಇಟ್ಟಿದ್ದನು.

ಈ ಹಿನ್ನೆಲೆಯಲ್ಲಿ ಶರತ್ ಎಸಿಬಿಗೆ ದೂರು ನೀಡಿದ್ದರು. ಅರ್ಜಿದಾರ ಶರತ್ ಅವರನ್ನು ಗುರುವಾರ ದುರ್ಗಪ್ಪ ತನ್ನ ಬೈಕ್‍ನಲ್ಲಿ ಕುಳ್ಳಿರಿಸಿಕೊಂಡು ಬಂದು, ಪುತ್ತೂರು ನಗರದ ಮುಖ್ಯ ರಸ್ತೆಯ ಕರ್ಣಾಟಕ ಬ್ಯಾಂಕ್ ಬಳಿ 3 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.