ಚೆನ್ನೈ, ಮಾರ್ಚ್ 16 : ತಮಿಳು ನಟ ಟಿವಿಕೆ ಸಂಸ್ಥಾಪಕ ವಿಜಯ್ ಗೆ ಇದೀಗ ಬಿಜೆಪಿ ಮಹತ್ವದ ಆಫರ್ ನೀಡಿದೆಯೆಂಬ ವರದಿಗಳು ತಮಿಳುನಾಡು ರಾಜಕೀಯದಲ್ಲಿ ಹರಿಡಾಡುತ್ತಿದೆ. ಒಂದು ವೇಳೆ ಪಕ್ಷಕ್ಕೆ ಸೇರಿದರೆ ಡಿಸಿಎಂ ಹುದ್ದೆ ಆಫರ್ ನ್ನು ಬಿಜೆಪಿ ನೀಡಿದೆ.

ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಅಧಿಕಾರಕ್ಕೆ ಬಂದರೆ ವಿಜಯ್ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ನೀಡುವ ಪ್ರಸ್ತಾಪವನ್ನು ಬಿಜೆಪಿ ನಾಯಕತ್ವ ಮುಂದಿಟ್ಟಿದೆ ಎಂದು ಮೂಲಗಳು ಹೇಳಿವೆ. ಜೊತೆಗೆ ಟಿವಿಕೆ ಪಕ್ಷಕ್ಕೆ ಸುಮಾರು 80 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ಈ ಕುರಿತಂತೆ ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ. ತಮಿಳುನಾಡಿನಲ್ಲಿ ಈಗಾಗಲೇ ಡಿಎಂಕೆ ಹಾಗೂ All India Anna Dravida Munnetra Kazhagam (ಎಐಎಡಿಎಂಕೆ) ನಡುವಿನ ಪೈಪೋಟಿ ಗಟ್ಟಿಯಾಗಿರುವ ಹಿನ್ನೆಲೆಯಲ್ಲಿ ವಿಜಯ್ ಪಕ್ಷದ ರಾಜಕೀಯ ಹೆಜ್ಜೆ ಮುಂದಿನ ದಿನಗಳಲ್ಲಿ ಮಹತ್ವ ಪಡೆದುಕೊಳ್ಳಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ವಿಜಯ್ ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿ ಟಿವಿಕೆ ಪಕ್ಷವನ್ನು ಸ್ಥಾಪಿಸಿದ್ದು, ಮುಂದಿನ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವನ್ನು ಘೋಷಿಸಿದ್ದಾರೆ. ಆದ್ದರಿಂದ ಬಿಜೆಪಿ–ಟಿವಿಕೆ ಮೈತ್ರಿ ಕುರಿತ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿವೆ.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ನಟ ವಿಜಯ್ ನೇತೃತ್ವದ ತಮಿಳಗಂ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಎಐಎಡಿಎಂಕೆ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಸೇರಲಿದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ.
‘X’ ನಲ್ಲಿ ಪೋಸ್ಟ್ ಮಾಡಿರುವ ಟಿವಿಕೆ ಪ್ರಧಾನ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಜೊತೆಗಿನ ಸಂಭಾವ್ಯ ಸಂಬಂಧದ ಬಗ್ಗೆ ವದಂತಿಗಳನ್ನು ಹರಡಲು ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿರುವುದಕ್ಕೆ ಆಡಳಿತಾರೂಢ ಡಿಎಂಕೆಯನ್ನು ದೂಷಿಸಿದ್ದಾರೆ. “ಸಾರ್ವಜನಿಕ ಸಮಸ್ಯೆಗಳಿಂದ ಎಲ್ಲರ ಗಮನವನ್ನು ಬೇರೆಡೆ ಸೆಳೆಯುವುದು ಅವರ ಉದ್ದೇಶವಾಗಿದೆ” ಎಂದು ಅವರು ಹೇಳಿದ್ದಾರೆ.