ವಿಜಯಪುರ,ಮಾರ್ಚ್ 31: ಕೆಎಸ್ ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಬೆಂಕಿಯಲ್ಲಿ ಬೈಕ್ ಸವಾರ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಟೋಲ್ಗೇಟ್ ಬಳಿ ನಡೆದಿದೆ.

ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಮೂಲದ ಅಭಿಷೇಕ ನಾಗರಾಳ (25) ಮೃತ ಯುವಕನಾಗಿದ್ದು, ಬಸ್ನ ಚಾಲಕ ಮತ್ತು ನಿರ್ವಾಹಕ ಸೇರಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ನಿಂದ ಕೆಳಗೆ ಇಳಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಆದರೆ ಬಸ್ ಕೂಡ ಬೆಂಕಿಗೆ ಆಹುತಿಯಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಮೆಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಹೇಳಲಾಗಿದ್ದು, ಅಪಘಾತಕ್ಕೂ ಮುನ್ನ ಅಭಿಷೇಕ ಇನ್ಸ್ಟಾಗ್ರಾಂನಲ್ಲಿ “ಇಂದು ಮಧ್ಯಾಹ್ನ ನಾನು ಸಾಯುತ್ತಿದ್ದೇನೆ. ಅವಳು ನನಗೆ ಬೇಕು, ಅವಳನ್ನು ನನ್ನಿಂದ ದೂರ ಮಾಡಿದವರೇ ನನ್ನ ಸಾವಿಗೆ ಹೊಣೆ” ಎಂದು ಮೂವರ ಹೆಸರನ್ನು ಉಲ್ಲೇಖಿಸಿ ತನ್ನ ನೋವನ್ನು ಹೊರಹಾಕಿದ್ದಾನೆ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇದು ನಿಜಕ್ಕೂ ಅಪಘಾತವೋ ಅಥವಾ ಆತ್ಮಹತ್ಯೆಯೋ ಎಂಬುದು ಆ ಬಳಿಕವೇ ಗೊತ್ತಾಗಬೇಕಿದೆ.