LATEST NEWS
ಬಿಜೆಪಿ ಸರಕಾರದ ವಿರುದ್ದ ತಿರುಗಿಬಿದ್ದ ವಿಎಚ್ ಪಿ – ದೇವಸ್ಥಾನಗಳ ಸರಕಾರೀಕರಣಕ್ಕೆ ವಿರೋಧ
ಮಂಗಳೂರು ಫೆಬ್ರವರಿ 4 : ರಾಜ್ಯದ ಬಿಜೆಪಿ ಸರಕಾರದ ವಿರುದ್ದ ಈಗ ವಿಶ್ವಹಿಂದೂ ಪರಿಷತ್ ತಿರುಗಿ ಬಿದ್ದಿದ್ದು, ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಖಾಸಾಗಿ ಹಿಂದೂ ದೇವಾಲಯಗಳ ಸರಕಾರಿಕರಣಕ್ಕೆ ವಿಶ್ವ ಹಿಂದೂ ಪರಿಷತ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಕರೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷರಾದ ಪ್ರೊ.ಎಂ.ಬಿ. ಪುರಾಣಿಕ್ ಅವರು ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರುವ ಆದೇಶ ಹಿಂದೂ ವಿರೋಧಿಯಾಗಿದೆ. ಖಾಸಗಿ ದೇವಾಲಯಗಳಿಗೆ ಅಂಕುಶ ಹಾಕುವ ಪ್ರಯತ್ನದಲ್ಲಿ ದೇವಸ್ಥಾನಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ.
ರಾಜ್ಯದಲ್ಲಿ ಸಾವಿರಾರು ಖಾಸಗಿ ಹಿಂದೂ ದೇವಸ್ಥಾನಗಳಿದ್ದು ಧಾರ್ಮಿಕ, ಶೈಕ್ಷಣಿಕ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಜೊತೆಗೆ ನಿರಂತರ ಅನ್ನದಾನ, ವಿದ್ಯಾ ದಾನ ಇನ್ನಿತರ ಅನೇಕ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ದೇವಸ್ಥಾನಗಳಿಗಿಂತ ಚೆನ್ನಾಗಿ ಖಾಸಗಿ ದೇವಸ್ಥಾನಗಳು ಆಡಳಿತ ನಡೆಸುತ್ತಿದ್ದು ಈ ಆದೇಶದ ಮೂಲಕ ಮುಂದಿನ ದಿನಗಳಲ್ಲಿ ಖಾಸಗಿ ದೇವಾಲಯಗಳನ್ನು ಸರ್ಕಾರ ವಶ ಪಡಿಸುವ ಹುನ್ನಾರವಾಗಿದೆ ಎಂದು ಆರೋಪಿಸಿದರು. ಆದ್ದರಿಂದ ಸರ್ಕಾರ ಈ ಆದೇಶವನ್ನು ಪುನರ್ ಪರಿಶೀಲಿಸಿ ಕೂಡಲೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.