ಪುತ್ತೂರು ಎಪ್ರಿಲ್ 25: ನಾಸಿಕ್ನ ಕಂಪನಿಯೊಂದರಲ್ಲಿ ನಡೆದಿದೆ ಎನ್ನಲಾದ ‘ಕಾಪೊರೇಟ್ ಜಿಹಾದ್’ ಮತ್ತು ಮತಾಂತರ ಯತ್ನವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ (VHP) ಹಾಗೂ ಬಜರಂಗದಳದ ನೇತೃತ್ವದಲ್ಲಿ ಶುಕ್ರವಾರ ಸಂಜೆ ನಗರದ ದರ್ಬೆ ವೃತ್ತದ ಬಳಿ ಪ್ರತಿಭಟನಾ ಸಭೆ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ, “ಲವ್ ಜಿಹಾದ್ ಮತ್ತು ಮತಾಂತರದಂತಹ ಕೃತ್ಯಗಳು ಈಗ ಕಾಪೊರೇಟ್ ಕಂಪನಿಗಳನ್ನೂ ಪ್ರವೇಶಿಸಿರುವುದು ಆತಂಕಕಾರಿ. ಸರ್ಕಾರಗಳು ಇದನ್ನು ನಿಯಂತ್ರಿಸದಿದ್ದರೆ ಸಮಾಜವೇ ಎದ್ದು ನಿಲ್ಲಬೇಕಾಗುತ್ತದೆ. ಯಾವುದೇ ದೊಡ್ಡ ಕಂಪನಿಯೇ ಆಗಲಿ, ಇಂತಹ ಕೃತ್ಯಗಳಿಗೆ ಬೆಂಬಲ ನೀಡಿದರೆ ನಾವು ತೊಡೆತಟ್ಟಿ ನಿಲ್ಲುತ್ತೇವೆ,” ಎಂದು ಎಚ್ಚರಿಸಿದರು.
ವಿಎಚ್ಪಿ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, “ಸನಾತನ ಧರ್ಮದ ಮೇಲೆ ಸಾವಿರಾರು ವರ್ಷಗಳಿಂದ ದಬ್ಬಾಳಿಕೆ ನಡೆಯುತ್ತಿದ್ದರೂ ಹಿಂದೂ ಧರ್ಮ ನಾಶವಾಗಿಲ್ಲ. ಅಮಾಯಕ ಹೆಣ್ಣುಮಕ್ಕಳನ್ನು ನಂಬಿಸಿ ಮತಾಂತರ ಮಾಡುವ ಕೂಪಕ್ಕೆ ತಳ್ಳಲಾಗುತ್ತಿದೆ. ಈ ಹೊಸ ಸವಾಲನ್ನು ಎದುರಿಸಲು ಹಿಂದೂ ಸಮಾಜ ಸನ್ನದ್ಧವಾಗಿದೆ,” ಎಂದರು. ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಕರ್ತರು ಮತ್ತು ಪ್ರಮುಖರು ಉಪಸ್ಥಿತರಿದ್ದರು.