LATEST NEWS
ಬಾಂಗ್ಲಾದೇಶದ ಹಿಂದೂಗಳ ಸುರಕ್ಷತೆಗೆ ಕೇಂದ್ರ ಸರಕಾರ ಕ್ರಮಕೈಗೊಳ್ಳಬೇಕು – ವಿಶ್ವಹಿಂದೂ ಪರಿಷತ್
ಮಂಗಳೂರು ಅಗಸ್ಟ್ 10: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಯನ್ನು ನಿಲ್ಲಿಸಿ ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರ ಹಾಗೂ ವಿಶ್ವ ಸಮುದಾಯ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಹಿಂದು ಪರಿಷತ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಬಾಂಗ್ಲಾದ ಚುನಾಯಿತ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ಅಲ್ಲಿನ ತೀವ್ರಗಾಮಿ ಜಿಹಾದಿ ಶಕ್ತಿಗಳು ಭಾರಿ ಪ್ರಮಾಣದಲ್ಲಿ ದಾಳಿ ನಡೆಸುತ್ತಿವೆ. ಹಿಂದು ಧಾರ್ಮಿಕ ಸ್ಥಳಗಳು, ವ್ಯಾಪಾರ ಸಂಸ್ಥೆಗಳು, ಹಿಂದುಗಳ ಮನೆಗಳನ್ನು ಗುರಿಯಾಗಿರಿಸಿ ದಾಳಿ ನಡೆಯುತ್ತಿದೆ. ಹಿಂದುಗಳನ್ನು ಕ್ರೂರವಾಗಿ ಹಿಂಸಿಸುವ ಮೂಲಕ ಮಾನವ ಹಕ್ಕು, ಧಾರ್ಮಿಕ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆ. ಬಾಂಗ್ಲಾ ದೇಶದ ಪ್ರತಿ ಜಿಲ್ಲೆಯಲ್ಲೂ ನೂರಕ್ಕೂ ಹೆಚ್ಚು ಹಿಂದು ದೇವಾಲಯಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ. ಹಿಂದುಗಳ ಮೇಲಿನ ಈ ಹಿಂಸೆ, ದಾಳಿ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಸುರಕ್ಷತೆಗಾಗಿ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವುದು ವಿಶ್ವ ಸಮುದಾಯದ ಜವಾಬ್ದಾರಿ. ಭಾರತ ಸರ್ಕಾರವು ಬಾಂಗ್ಲಾದಲ್ಲಿರುವ ಹಿಂದು ಅಲ್ಪಸಂಖ್ಯಾತರ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
You must be logged in to post a comment Login