ಅರಬ್ಬೀ ಸಮುದ್ರದಲ್ಲಿ “ವಾಯು” ಚಂಡಮಾರುತ ಮೂರು ದಿನ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ

ಮಂಗಳೂರು ಜೂನ್ 10: ಅರಬ್ಬೀ ಸಮುದ್ರದಲ್ಲಿ “ವಾಯು” ಚಂಡಮಾರುತ ಉಂಟಾಗಿದ್ದು , ಈ ಹಿನ್ನಲೆಯಲ್ಲಿ ಮೂರು ದಿನ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿ ಒಂದು ದಿನದ ನಂತರ ಕರಾವಳಿಗೆ ಮುಂಗಾರು ಪ್ರವೇಶಿಸಿದ್ದು, ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಮಳೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಾಂತ ದಟ್ಟವಾದ ಮೋಡ ಕವಿದ ವಾತವರಣ ಇದೆ.

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಲಿದೆ.ಈ ಚಂಡ ಮಾರುತಕ್ಕೆ “ವಾಯು” ಎಂದು ನಾಮಕರಣ ಮಾಡಲಾಗಿದೆ.

ಸಮುದ್ರದಿಂದ ತೀರದಲ್ಲಿ ಈಗಾಗಲೇ ರಭಸವಾಗಿ ಗಾಳಿ ಬೀಸಲಾರಂಭಿಸಿದೆ. ಇದು ಮುಂದಿನ 2-3 ದಿನ ಇನ್ನಷ್ಟು ತೀವ್ರಗೊಳ್ಳಲಿದೆ. ನಿನ್ನೆ ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35ರಿಂದ 45 ಕಿ.ಮೀ. ವೇಗದ ವರೆಗೆ ಗಾಳಿ ಬೀಸುತ್ತಿತ್ತು. ಸೋಮವಾರ ಗಂಟೆಗೆ 40ರಿಂದ 55 ಕಿ.ಮೀ. ವರೆಗೂ ಗಾಳಿ ಬೀಸುವ ಸಂಭವ ಇದೆ.

ಮಂಗಳವಾರ ಇದರ ವೇಗ ಮತ್ತಷ್ಟು ಹೆಚ್ಚಿ 55ರಿಂದ 65 ಕಿ.ಮೀ. ಇರುತ್ತದೆ. ಕೆಲವೊಮ್ಮೆ 75 ಕಿ.ಮೀ. ವರೆಗೂ ತಲುಪುವ ಸಂಭವ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಹಿನ್ನಲೆಯಲ್ಲಿ ಮೂರು ದಿನ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ ದ.ಕ ಜಿಲ್ಲಾಡಳಿತ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
ಅರಬ್ಬೀ ಸಮುದ್ರದಲ್ಲಿ ವಾಯು ಭಾರ ಕುಸಿತ ಹಾಗೂ ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ತುರ್ತು ಸೇವೆಗೆ ಟೋಲ್‌ಫ್ರೀ ಸಂಖ್ಯೆ 1077 ಸಂಪರ್ಕಿಸಬಹುದಾಗಿದೆ. ಇದು ದಿನದ 24 ತಾಸುಗಳ ಕಾಲವೂ ಕಾರ್ಯಾಚರಿಸಲಿದೆ. ಇದಲ್ಲದೆ ವಾಟ್ಸ್‌ಆ್ಯಪ್‌ ಸಂಖ್ಯೆ 9483908000 ಸಂಪರ್ಕಿಸ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VIDEO

Facebook Comments

comments