ನವದೆಹಲಿ,ಮಾರ್ಚ್ 26: ಭಾರತೀಯ ರೈಲ್ವೆಯ ಅತ್ಯಂತ ಪ್ರತಿಷ್ಠಿತ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾದ ಆಹಾರದ ಗುಣಮಟ್ಟದಲ್ಲಿ ತೀವ್ರ ಲೋಪ ಕಂಡುಬಂದ ಹಿನ್ನೆಲೆಯಲ್ಲಿ, ರೈಲ್ವೆ ಮಂಡಳಿಯು ಕಠಿಣ ಕ್ರಮ ಜರುಗಿಸಿದೆ. ಈ ಸಂಬಂಧ ಐಆರ್ಸಿಟಿಸಿ (IRCTC) ಸಂಸ್ಥೆಗೆ ₹10 ಲಕ್ಷ ಹಾಗೂ ಆಹಾರ ಸರಬರಾಜು ಮಾಡಿದ ಖಾಸಗಿ ಗುತ್ತಿಗೆದಾರರಿಗೆ ₹50 ಲಕ್ಷ ಸೇರಿದಂತೆ ಒಟ್ಟು ₹60 ಲಕ್ಷ ರೂಪಾಯಿ ಭಾರಿ ದಂಡ ವಿಧಿಸಲಾಗಿದೆ.

ಕಳೆದ ಮಾರ್ಚ್ 15, 2026ರಂದು ಪಟ್ನಾ – ಟಾಟಾನಗರ ವಂದೇ ಭಾರತ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ: 21896) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ರಿತೇಶ್ ಕುಮಾರ್ ಸಿಂಗ್ ಎಂಬ ಪ್ರಯಾಣಿಕರಿಗೆ ನೀಡಲಾದ ಊಟದಲ್ಲಿ ಜೀವಂತ ಹುಳುಗಳು ಪತ್ತೆಯಾಗಿದ್ದವು. ವಿಶೇಷವಾಗಿ, ಮೊಸರಿನ ಕಪ್ ಮತ್ತು ದಾಲ್ನಲ್ಲಿ ಹುಳುಗಳು ಇರುವುದನ್ನು ಗಮನಿಸಿದ ಪ್ರಯಾಣಿಕರು, ತಕ್ಷಣವೇ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ವೈರಲ್ ವಿಡಿಯೋದಲ್ಲಿ ಕಂಡುಬಂದಂತೆ, ಪ್ರಯಾಣಿಕರು ಮೊಸರಿನಲ್ಲಿದ್ದ ಹುಳುವನ್ನು ತೋರಿಸಿದಾಗ, ರೈಲ್ವೆ ಸಿಬ್ಬಂದಿಯು ಅದನ್ನು “ಕೇಸರಿ” (Saffron) ಎಂದು ಹೇಳಿ ಸಮರ್ಥಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಪ್ರಯಾಣಿಕರು ಪಟ್ಟುಹಿಡಿದು ತಪಾಸಣೆ ನಡೆಸಿದಾಗ, ಆ ಮೊಸರು ಈಗಾಗಲೇ ಅವಧಿ ಮುಕ್ತಾಯಗೊಂಡಿರುವುದು (Expired) ದೃಢಪಟ್ಟಿತ್ತು. ಇದು ರೈಲ್ವೆ ಆಹಾರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಸಚಿವಾಲಯವು ತಕ್ಷಣದ ತನಿಖೆಗೆ ಆದೇಶಿಸಿತ್ತು. ತನಿಖಾ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದ್ದು ಸೇವಾ ಲೋಪಕ್ಕಾಗಿ IRCTCಗೆ ₹10 ಲಕ್ಷ ಹಾಗೂ ಆಹಾರ ಪೂರೈಕೆದಾರ ಸಂಸ್ಥೆಯಾದ ‘ಕೃಷ್ಣ ಎಂಟರ್ಪ್ರೈಸಸ್’ಗೆ ₹50 ಲಕ್ಷ ದಂಡ ವಿಧಿಸಲಾಗಿದೆ.
ಕಳಪೆ ಗುಣಮಟ್ಟದ ಆಹಾರ ಪೂರೈಸಿದ ಸದರಿ ಗುತ್ತಿಗೆದಾರ ಸಂಸ್ಥೆಯ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಲಾಗಿದೆ. “IRCTC ಕೇವಲ ಗುತ್ತಿಗೆದಾರರ ಮೇಲೆ ದಂಡ ವಿಧಿ ಸುವುದಷ್ಟೇ ಅಲ್ಲದೆ, ಪ್ರಯಾಣಿಕರಿಗೆ ಗುಣಮಟ್ಟದ ಆಹಾರ ಸಿಗುವಂತೆ ನೋಡಿಕೊಳ್ಳುವ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ನಿಭಾಯಿಸಬೇಕು” ಎಂದು ಇಲಾಖೆ ಖಡಕ್ ಸೂಚನೆ ನೀಡಿದೆ. “ಪ್ರಯಾಣಿಕರ ಸುರಕ್ಷತೆ ಮತ್ತು ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇಂತಹ ಬೇಜವಾಬ್ದಾರಿತನ ತೋರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ,” ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.