ಡಾಂಬುಲಾ, ಜೂನ್ 21: ಕಳೆದ ಪಂದ್ಯದಲ್ಲಿ ಲಂಕಾ (Srilanka) ಆಟಗಾರರು ಮೈದಾನದಲ್ಲಿ “ಇದು ಐಪಿಎಲ್ ಅಲ್ಲ, ಮನೆಗೆ ಹೋಗು” ಎಂದು ಸ್ಲೆಡ್ಜಿಂಗ್ ಮಾಡಿದ್ದಕ್ಕೆ ಭಾರತ ‘ಎ’ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Suryavanshi) ಬ್ಯಾಟ್ ಮೂಲಕವೇ ಸಿಡಿಲಬ್ಬರದ ಪ್ರತ್ಯುತ್ತರ ನೀಡಿದ್ದಾರೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಲಂಕಾ ಬೌಲರ್ಗಳ ಮೇಲೆ ಸವಾರಿ ಮಾಡಿದ ಸೂರ್ಯವಂಶಿ, ಮೈದಾನದ ಮೂಲೆ ಮೂಲೆಗೂ ಸಿಕ್ಸರ್-ಬೌಂಡರಿಗಳ ಮಳೆ ಹರಿಸಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತಕ್ಕೆ ವೈಭವ್ ಸೂರ್ಯವಂಶಿ ಅಕ್ಷರಶಃ ಬಿರುಗಾಳಿಯ ಆರಂಭ ನೀಡಿದರು. ಕೇವಲ 29 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಹಾಗೂ ಭರ್ಜರಿ 8 ಸಿಕ್ಸರ್ಗಳ ನೆರವಿನಿಂದ ಬರೋಬ್ಬರಿ 94 ರನ್ ಚಚ್ಚಿ ಶತಕದ ಅಂಚಿನಲ್ಲಿ ಔಟಾದರು.
ತಮ್ಮ ಇನಿಂಗ್ಸ್ನ ಆರಂಭದಲ್ಲೇ ಅಬ್ಬರಿಸಿದ ಸೂರ್ಯವಂಶಿ, ಕೇವಲ 11 ಎಸೆತಗಳಲ್ಲಿ (5 ಬೌಂಡರಿ, 5 ಸಿಕ್ಸರ್) ಅರ್ಧಶತಕ ಪೂರೈಸಿ ವಿಶ್ವದಾಖಲೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಅತಿ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ಹಿಂದೆ 2005 ರಲ್ಲಿ ಶ್ರೀಲಂಕಾದಲ್ಲಿ ನಡೆದ ದೇಶೀಯ ಲಿಸ್ಟ್ ಎ ಪಂದ್ಯದಲ್ಲಿ ಕೌಶಲ್ಯ ವೀರರತ್ನೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಅರ್ಧಶತಕದ ನಂತರದ 18 ಎಸೆತಗಳಲ್ಲಿ 44 ರನ್ಗಳನ್ನು ವೈಭವ್ ಅವರು ಚಚ್ಚಿದ್ದು ಲಂಕಾ ಬೌಲರ್ಗಳನ್ನು ಅಸಹಾಯಕರನ್ನಾಗಿ ಮಾಡಿತು.