Connect with us

  KARNATAKA

  ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಯು.ಟಿ ಖಾದರ್ ?

  ಬೆಂಗಳೂರು, ಮೇ 22: ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ.

  ಸ್ಪೀಕರ್ ಸ್ಥಾನಕ್ಕೆ ಆರ್ ವಿ ದೇಶಪಾಂಡೆ, ಟಿ ಬಿ ಜಯಚಂದ್ರ ಹಾಗು ಎಚ್ ಕೆ ಪಾಟೀಲ್ ಅವರ ಹೆಸರು ಕೇಳಿಬರುತ್ತಿತ್ತು. ಆದರೆ ಇದೀಗ ಕೊನೆ ಗಳಿಗೆಯಲ್ಲಿ ಯು ಟಿ ಖಾದರ್ ಅವರನ್ನು ವಿಧಾನ ಸಭೆಯ ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ಆಯ್ಕೆ ಮಾಡಿದೆ ಎಂದು ತಿಳಿದು ಬಂದಿದೆ.

  ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ರಾಷ್ಟ್ರೀಯ ಪ್ರಧಾನ್ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಖಾದರ್ ಅವರನ್ನು ಕರೆದು ಮಾತನಾಡಿದ್ದು ಅಲ್ಪಸಂಖ್ಯಾತರಿಗೆ ಪ್ರಮುಖ ಹುದ್ದೆ ನೀಡಬೇಕು ಎಂದು ರಾಹುಲ್ ಗಾಂಧಿ ತೀರ್ಮಾನಿಸಿದ್ದು ಸ್ಪೀಕರ್ ರಂತಹ ಪ್ರತಿಷ್ಠಿತ ಹಾಗು ಅತ್ಯಂತ ಜವಾಬ್ದಾರಿಯುತ ಹುದ್ದೆಗೆ ನೀವೇ ಸೂಕ್ತ ಎಂದು ಪಕ್ಷ ತೀರ್ಮಾನಿಸಿದೆ. ನೀವು ಇದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ಖಾದರ್ ಒಪ್ಪಿಗೆ ಸೂಚಿಸಿದ್ದು ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು  ಕೆಪಿಸಿಸಿ ಅಧ್ಯಕ್ಷ , ಡಿಸಿಎಂ  ಡಿ ಕೆ ಶಿವಕುಮಾರ್  ಅವರ ಜೊತೆಗೂ ಖಾದರ್ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.

  ಮಂಗಳವಾರ 11. 30ಕ್ಕೆ ಯು ಟಿ  ಖಾದರ್ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿಸಿಎಂ  ಡಿ ಕೆ ಶಿವಕುಮಾರ್  ಅವರು ನಾಮಪತ್ರಕ್ಕೆ ಸಹಿ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.  ಎರಡು ವರ್ಷಗಳ ಬಳಿಕ ಸಂಪುಟ ಪುನಾರಚನೆಯಲ್ಲಿ  ಖಾದರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಪಕ್ಷ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.

  ಮಂಗಳೂರು ಕ್ಷೇತ್ರದಿಂದ ಸತತ 5 ನೇ ಬಾರಿ ಗೆಲುವು ಸಾಧಿಸಿ ಈ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅವರು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಆರೋಗ್ಯ, ಆಹಾರ ಹಾಗೂ  ಕುಮಾರಸ್ವಾಮಿ ಸರಕಾರದಲ್ಲಿ ವಸತಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕರಾಗಿ ಕಾರ್ಯನಿರ್ವಹಿಸಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply