ವಾಷಿಂಗ್ಟನ್/ಟೆಹ್ರಾನ್: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಸ್ಫೋಟಕ ಹಂತ ತಲುಪಿದ್ದು, ಉಭಯ ರಾಷ್ಟ್ರಗಳು ಪೂರ್ಣ ಪ್ರಮಾಣದ ಯುದ್ಧದ ಹಾದಿ ಹಿಡಿದಿವೆ. ಇರಾನ್ನ ಬಹು ಪ್ರಮುಖ ನಗರಗಳ ಮೇಲೆ ಅಮೆರಿಕದ ಮಿಲಿಟರಿ ಸೆಂಟ್ರಲ್ ಕಮಾಂಡ್ (CENTCOM) ಸತತ ಎರಡನೇ ದಿನವೂ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಸೈನ್ಯವು ಕುವೈತ್ ಹಾಗೂ ಬಹ್ರೇನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮಳೆಗರೆದಿದೆ.

ಫಾಕ್ಸ್ ನ್ಯೂಸ್ ಜೊತೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕ ಮಂಡಿಸಿರುವ ಶಾಂತಿ ಒಪ್ಪಂದಕ್ಕೆ ಇರಾನ್ ತಕ್ಷಣ ಸಹಿ ಹಾಕದಿದ್ದರೆ “ನಾಳೆ ರಾತ್ರಿ” ಮತ್ತಷ್ಟು ಭೀಕರ ಬಾಂಬ್ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. “ಇರಾನ್ ರಾಜಧಾನಿ ಟೆಹ್ರಾನ್ನಿಂದ ಕೇವಲ 64 ಕಿಲೋಮೀಟರ್ ಹತ್ತಿರದ ಪ್ರದೇಶಗಳು ಸೇರಿದಂತೆ ದೇಶದ ಪ್ರಮುಖ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿ 49 ಅತ್ಯಾಧುನಿಕ ಟೊಮಾಹಾಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಅಮೆರಿಕದ ಯುದ್ಧ ವಿಮಾನಗಳು ಇರಾನ್ ಆಕಾಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಶತ್ರುಗಳ ರಾಡಾರ್ ವ್ಯವಸ್ಥೆಗಳನ್ನು ಧ್ವಂಸಗೊಳಿಸಿವೆ” ಎಂದು ಟ್ರಂಪ್ ಘೋಷಿಸಿದ್ದಾರೆ. ಅಲ್ಲದೆ, ಇರಾನ್ ಅಧಿಕಾರಿಗಳು ತಮಗೆ ಕರೆ ಮಾಡಿ ದಾಳಿ ನಿಲ್ಲಿಸುವಂತೆ ವಿನಂತಿಸಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಇರಾನ್ ಮಾಧ್ಯಮಗಳು ಟ್ರಂಪ್ ಅವರ ಈ ಹೇಳಿಕೆಯನ್ನು ಕಸದ ಬುಟ್ಟಿಗೆ ಹಾಕಿದ್ದು, ಯಾವುದೇ ನೇರ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿವೆ.
ಅಮೆರಿಕದ ದಾಳಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಬಹ್ರೇನ್ ಮತ್ತು ಕುವೈತ್ನಲ್ಲಿರುವ ಅಮೆರಿಕದ ಅಲಿ, ಅಹ್ಮದ್ ಮತ್ತು ಶೇಖ್ ಇಸಾ ವಾಯುನೆಲೆಗಳ ಮೇಲಿನ 18 ಪ್ರಮುಖ ಗುರಿಗಳನ್ನು ಕ್ಷಿಪಣಿಗಳ ಮೂಲಕ ಹೊಡೆದುರುಳಿಸಿರುವುದಾಗಿ ಐಆರ್ಎನ್ಎ (IRNA) ಸುದ್ದಿ ಸಂಸ್ಥೆ ವರದಿ ಮಾಡಿದೆ. ದಾಳಿಯ ಬೆನ್ನಲ್ಲೇ ಬಹ್ರೇನ್ನಲ್ಲಿ ವಾಯುದಾಳಿಯ ಸೈರನ್ಗಳು ಮೊಳಗಿದ್ದು, ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆಂತರಿಕ ಸಚಿವಾಲಯ ಸೂಚಿಸಿದೆ. ಇತ್ತ ಕುವೈತ್ ಸೇನೆಯು ಶತ್ರುಗಳ ವೈಮಾನಿಕ ಗುರಿಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಮೂಲಕ ತಡೆದು ಹೊಡೆದುರುಳಿಸುತ್ತಿರುವುದಾಗಿ ಪ್ರಕಟಿಸಿದೆ.
ವಿಶ್ವದ ಒಟ್ಟು ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ವಾಣಿಜ್ಯ ಹಡಗುಗಳು ಮತ್ತು ತೈಲ ಟ್ಯಾಂಕರ್ಗಳು ಸೇರಿದಂತೆ ಎಲ್ಲಾ ರೀತಿಯ ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಐಆರ್ಜಿಸಿ ಪ್ರಕಟಿಸಿದೆ. “ನೀವು ಹಾರ್ಮುಜ್ ಜಲಸಂಧಿಯನ್ನು ಅಸ್ಥಿರಗೊಳಿಸಿದರೆ, ಇಡೀ ಕೊಲ್ಲಿ ಪ್ರದೇಶವನ್ನು ಅಮೆರಿಕನ್ನರಿಗೆ ನರಕವಾಗಿಸುತ್ತೇವೆ” ಎಂದು ಐಆರ್ಜಿಸಿ ಏರೋಸ್ಪೇಸ್ ಫೋರ್ಸ್ ಕಮಾಂಡರ್ ಬ್ರಿಗೇಡಿಯರ್ ಜನರಲ್ ಮಜೀದ್ ಮೌಸಾವಿ ಎಚ್ಚರಿಸಿದ್ದಾರೆ. ಆದರೆ, ಇರಾನ್ನ ಈ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಅಮೆರಿಕದ ಸೆಂಟ್ಕಾಮ್ (CENTCOM) ತಳ್ಳಿಹಾಕಿದ್ದು, ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಎಂದಿನಂತೆ ಮುಂದುವರಿದಿದೆ ಎಂದು ಫ್ಯಾಕ್ಟ್-ಚೆಕ್ ಮಾಡಿದೆ. ಕದನ ವಿರಾಮ ಮುರಿದು ಬಿದ್ದಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ.