ಅಮೆರಿಕ, ಏಪ್ರಿಲ್ 05 : ಇಡೀ ವಿಶ್ವವನ್ನೇ ಬೆರಗುಗೊಳಿಸುವಂತಹ ಘಟನೆಯೊಂದರಲ್ಲಿ, ಸುಮಾರು ಮೂರು ದಶಕಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಈಗ ಜೀವಂತವಾಗಿ ಪತ್ತೆಯಾಗಿದ್ದಾಳೆ. 1994ರಲ್ಲಿ ಕೇವಲ 13 ವರ್ಷದವಳಿದ್ದಾಗ ಅರಿಜೋನಾದ ಪುಟ್ಟ ಪಟ್ಟಣ ಸ್ಟಾರ್ ವ್ಯಾಲಿಯಿಂದ ಕಾಣೆಯಾಗಿದ್ದ ಕ್ರಿಸ್ಟಿನಾ ಮೇರಿ ಪ್ಲಾಂಟೆ (Christina Marie Plante) ಎಂಬಾಕೆಯನ್ನು ಅಧಿಕಾರಿಗಳು ಈಗ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

1994ರ ಮೇ ತಿಂಗಳ ದಿನವೊಂದರಲ್ಲಿ, ನೀಲಿ ಕಣ್ಣು ಮತ್ತು ಹೊಂಬಣ್ಣದ ಕೂದಲಿನ ಕ್ರಿಸ್ಟಿನಾ ಮೇರಿ ಪ್ಲಾಂಟೆ ತನ್ನ ಮನೆಯ ಸಮೀಪವಿದ್ದ ಲಾಯಕ್ಕೆ ಕುದುರೆಯನ್ನು ನೋಡಲು ಹೋಗಿದ್ದಳು. ಅಂದು ಬಿಳಿ ಟಿ-ಶರ್ಟ್ ಮತ್ತು ಕಪ್ಪು ಶೂ ಧರಿಸಿದ್ದ ಆಕೆ ಅಲ್ಲಿಂದ ಮರಳಿ ಬರಲೇ ಇಲ್ಲ. ಆಕೆಯ ನಾಪತ್ತೆ ಪ್ರಕರಣವು ಅಂದು ಅಮೆರಿಕದಾದ್ಯಂತ ತಲ್ಲಣ ಸೃಷ್ಟಿಸಿತ್ತು. ಆಕೆ ಯಾವುದಾದರೂ ಅಪಾಯದಲ್ಲಿ ಸಿಲುಕಿರಬಹುದು ಅಥವಾ ಅಪಹರಣಕ್ಕೊಳಗಾಗಿರಬಹುದು ಎಂಬ ಶಂಕೆಯ ಮೇಲೆ ದಶಕಗಳ ಕಾಲ ತನಿಖೆ ನಡೆದಿದ್ದರೂ ಯಾವುದೇ ಸುಳಿವು ಲಭಿಸಿರಲಿಲ್ಲ.
ದಶಕಗಳ ಕಾಲ ಧೂಳು ಹಿಡಿದಿದ್ದ ಈ ‘ಕೋಲ್ಡ್ ಕೇಸ್’ಗೆ ಜೀವ ಬಂದಿದ್ದು ಗೀಲಾ ಕೌಂಟಿ ಶರೀಫ್ ಕಚೇರಿಯ ಅಧಿಕಾರಿಗಳ ಸತತ ಪ್ರಯತ್ನದಿಂದ. ಇತ್ತೀಚಿನ ಅತ್ಯಾಧುನಿಕ ‘ಜಿನಿಯಾಲಜಿಕಲ್ ಡಿಎನ್ಎ’ (Genealogical DNA) ತಂತ್ರಜ್ಞಾನವನ್ನು ಬಳಸಿ ತನಿಖಾಧಿಕಾರಿಗಳು ಆಕೆಯ ಕುಟುಂಬದ ಕೊಂಡಿಯನ್ನು ಪತ್ತೆಹಚ್ಚಿದರು. ಸಾರ್ವಜನಿಕ ಡಿಎನ್ಎ ಡೇಟಾಬೇಸ್ಗಳ ಮೂಲಕ ಲಭಿಸಿದ ಮಾಹಿತಿಯು ಅಧಿಕಾರಿಗಳನ್ನು ಈಗಿನ 45 ವರ್ಷ ವಯಸ್ಸಿನ ಕ್ರಿಸ್ಟಿನಾಳ ಬಳಿ ಕರೆದೊಯ್ದಿದೆ.
ಲಬ್ಯವಿರುವ ಮಾಹಿತಿಯ ಪ್ರಕಾರ, ಕ್ರಿಸ್ಟಿನಾ ಈಗ ಅರಿಜೋನಾದಿಂದ ದೂರದ ಮತ್ತೊಂದು ರಾಜ್ಯದಲ್ಲಿ ಹೊಸ ಹೆಸರಿನೊಂದಿಗೆ ನೆಲೆಸಿದ್ದಾರೆ. ಆಕೆ ಈಗ ವಿವಾಹವಾಗಿದ್ದು, ತನ್ನದೇ ಆದ ಸಂಸಾರ ಮತ್ತು ಮಕ್ಕಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಆಕೆ ಅಂದು ಸ್ವಯಂಪ್ರೇರಿತವಾಗಿ ಮನೆ ತೊರೆದಿದ್ದಳೇ ಅಥವಾ ಬಲವಂತವಾಗಿ ಕರೆದೊಯ್ಯಲ್ಪಟ್ಟಿದ್ದಳೇ ಎಂಬ ರಹಸ್ಯವನ್ನು ಆಕೆಯ ಸುರಕ್ಷತೆ ಮತ್ತು ಖಾಸಗಿತನದ ದೃಷ್ಟಿಯಿಂದ ಪೊಲೀಸರು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ಮಗಳು ಮೃತಪಟ್ಟಿದ್ದಾಳೆ ಎಂದೇ ಭಾವಿಸಿದ್ದ ಪೋಷಕರಿಗೆ ಈ ಸುದ್ಧಿ ಮರುಜನ್ಮ ನೀಡಿದಂತಿದೆ. “ನಮ್ಮ ಬದುಕಿನ 32 ವರ್ಷಗಳ ಸುದೀರ್ಘ ಕಾಯುವಿಕೆಗೆ ಇಂದು ತೆರೆ ಬಿದ್ದಿದೆ” ಎಂದು ಕುಟುಂಬಸ್ಥರು ಭಾವುಕರಾಗಿದ್ದಾರೆ. ಇಷ್ಟು ದೀರ್ಘಕಾಲದ ನಂತರವೂ ಹಳೆಯ ಪ್ರಕರಣವೊಂದನ್ನು ಭೇದಿಸಿದ ತನಿಖಾ ದಳದ ಕಾರ್ಯವೈಖರಿ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.