ವಾಷಿಂಗ್ಟನ್/ಟೆಹರಾನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗಿನ ಮೇಲೆ ನಡೆದ ಡ್ರೋನ್ ದಾಳಿಗೆ ಪ್ರತಿಯಾಗಿ, ಅಮೆರಿಕ ಶುಕ್ರವಾರ ಇರಾನ್ನ ಪ್ರಮುಖ ಕ್ಷಿಪಣಿ ಮತ್ತು ಡ್ರೋನ್ ನೆಲೆಗಳ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಯುದ್ಧ ಅಂತ್ಯಗೊಳಿಸಲು ಉಭಯ ದೇಶಗಳ ನಡುವೆ ಕಳೆದ ವಾರವಷ್ಟೇ ಮಧ್ಯಂತರ ಒಪ್ಪಂದವಾಗಿದ್ದರೂ, ಈ ದಿಢೀರ್ ಬೆಳವಣಿಗೆಯಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಮತ್ತು ಶಾಂತಿ ಮಾತುಕತೆಗಳಿಗೆ ಭಾರಿ ಹಿನ್ನಡೆಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸರಕು ಹಡಗಿನ ಮೇಲಿನ ಇರಾನ್ನ ಡ್ರೋನ್ ದಾಳಿಯನ್ನು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರ ಮುಂದೆ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ಈ ಹೇಳಿಕೆ ಬಂದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM), ಇರಾನ್ನಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳು, ಡ್ರೋನ್ ತಾಣಗಳು ಹಾಗೂ ಕರಾವಳಿ ರಾಡಾರ್ ವ್ಯವಸ್ಥೆಗಳ ಮೇಲೆ ಅತ್ಯಂತ ನಿಖರವಾದ ವಾಯುದಾಳಿ ನಡೆಸಿ ಕಾರ್ಯಾಚರಣೆ ಪೂರ್ಣಗೊಳಿಸಿರುವುದಾಗಿ ಪ್ರಕಟಿಸಿದೆ.
ಟ್ರಂಪ್ ಅವರ ಆರೋಪಕ್ಕೆ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಅಜೀಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಹಾರ್ಮುಜ್ ಜಲಸಂಧಿಯ ಸಂಪೂರ್ಣ ನಿಯಂತ್ರಣ ಇರಾನ್ ಕೈಯಲ್ಲಿದೆ. ನಿಯಮಗಳನ್ನು ಗೌರವಿಸಿ. ನಮ್ಮ ನಿಯಂತ್ರಣವನ್ನು ಕದನ ವಿರಾಮ ಉಲ್ಲಂಘನೆ ಎಂದು ತಪ್ಪಾಗಿ ಅರ್ಥೈಸಬೇಡಿ. ಇದು ಕದನ ವಿರಾಮದ ಉಲ್ಲಂಘನೆಯಲ್ಲ, ಬದಲಿಗೆ ಕದನ ವಿರಾಮದ ನಿರ್ವಹಣೆ” ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ. ಇತ್ತ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು, “ಇರಾನ್ಗೆ ಭಿನ್ನಾಭಿಪ್ರಾಯಗಳಿದ್ದರೆ ಮಾತುಕತೆಗೆ ಬರಬೇಕು, ಹಿಂಸೆಗೆ ಪ್ರತಿಯಾಗಿ ಹಿಂಸೆಯೇ ಉತ್ತರವಾಗುತ್ತದೆ” ಎಂದು ಕಡಕ್ ಎಚ್ಚರಿಕೆ ನೀಡಿದ್ದಾರೆ.
ಈ ವಾಯುದಾಳಿಯ ಪರಿಣಾಮವಾಗಿ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಮತ್ತೆ ನಿಧಾನಗೊಂಡಿದೆ. ಸಮುದ್ರ ಮಾಹಿತಿ ಸಂಸ್ಥೆ ‘ವಿಂಡ್ವಾರ್ಡ್’ ಪ್ರಕಾರ, ದಾಳಿಯ ಬೆನ್ನಲ್ಲೇ ಕನಿಷ್ಠ ಎರಡು ಪ್ರಮುಖ ತೈಲ ಟ್ಯಾಂಕರ್ಗಳು ಮಾರ್ಗ ಮಧ್ಯದಲ್ಲೇ ಹಿಂತಿರುಗಿವೆ. ಒಮಾನ್ ಕರಾವಳಿಯ ಸಮೀಪ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ಬಿದ್ದಿರುವುದನ್ನು ಬ್ರಿಟನ್ ಸೇನೆಯೂ ದೃಢಪಡಿಸಿದೆ. ಸದ್ಯ ಹಡಗುಗಳನ್ನು ಸುರಕ್ಷಿತವಾಗಿ ಹೊರತೆಗೆದುಕೊಳ್ಳುವ ಕಾರ್ಯಾಚರಣೆಯನ್ನು ಅಂತರರಾಷ್ಟ್ರೀಯ ಸಾಗರ ಸಂಸ್ಥೆ (IMO) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇನ್ನೂ ಸುಮಾರು 500ಕ್ಕೂ ಹೆಚ್ಚು ಹಡಗುಗಳು ಆ ಪ್ರದೇಶದಲ್ಲೇ ಸಿಲುಕಿಕೊಂಡಿವೆ ಎಂದು IMO ಮಹಾಸಚಿವ ಅರ್ಸೆನಿಯೊ ಡೊಮಿಂಗ್ವೆಜ್ ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ವಾಷಿಂಗ್ಟನ್ನಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಐತಿಹಾಸಿಕ ಶಾಂತಿ ಚೌಕಟ್ಟು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದನ್ನು ಶಾಶ್ವತ ಶಾಂತಿಯತ್ತ ಮೊದಲ ಹೆಜ್ಜೆ ಎಂದು ಬಣ್ಣಿಸಲಾಗಿದೆಯಾದರೂ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, “ಹಿಜ್ಬುಲ್ಲಾ ಉಗ್ರ ಸಂಘಟನೆ ಸಂಪೂರ್ಣ ನಿಶಸ್ತ್ರೀಕರಣಗೊಳ್ಳುವವರೆಗೆ ದಕ್ಷಿಣ ಲೆಬನಾನ್ನ ಭದ್ರತಾ ವಲಯದಿಂದ ಇಸ್ರೇಲ್ ಸೇನೆ ಹಿಂದೆ ಸರಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.