ಹರಿಯಾಣ, ಮಾರ್ಚ್ 22:ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿಯನ್ನೇ ಅರಿವಳಿಕೆ (Anesthesia) ಚುಚ್ಚುಮದ್ದು ನೀಡಿ ಹತ್ಯೆ ಮಾಡಿರುವ ಘಟನೆ ಗುರುಗ್ರಾಮದ ಗರ್ಹಿ ಹರ್ಸಾರು ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಪತಿ ಅರುಣ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತಳನ್ನು ಕಾಜಲ್ ಎಂದು ಗುರುತಿಸಲಾಗಿದ್ದು, ಆಕೆ ವೃತ್ತಿಯಲ್ಲಿ ನರ್ಸ್ ಆಗಿದ್ದಳು. ಆರೋಪಿಯಾಗಿರುವ ಅರುಣ್ ಶರ್ಮಾ ರೇಡಿಯಾಲಜಿಸ್ಟ್ ಆಗಿದ್ದಾನೆ. ಇಬ್ಬರೂ ಒಂದೇ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುವ ವೇಳೆ ಪರಿಚಯವಾಗಿ, ಸ್ನೇಹ ಪ್ರೀತಿಗೆ ತಿರುಗಿ ಕಳೆದ ನವೆಂಬರ್ನಲ್ಲಿ ಮದುವೆಯಾಗಿದ್ದರು.
ಮದುವೆಯ ನಂತರ ದಂಪತಿಯ ನಡುವೆ ಅಸಮಾಧಾನ ಹೆಚ್ಚಾಗತೊಡಗಿತ್ತು ಎನ್ನಲಾಗಿದೆ. ಸಣ್ಣಪುಟ್ಟ ವಿಚಾರಗಳಿಗೂ ವಾಗ್ವಾದಗಳು ನಡೆಯುತ್ತಿದ್ದುದಲ್ಲದೆ, ವರದಕ್ಷಿಣೆ ಸಂಬಂಧಿತ ಕಿರುಕುಳ ಹಾಗೂ ಹಲ್ಲೆ ನಡೆದಿರುವುದಾಗಿ ಕಾಜಲ್ ಕುಟುಂಬಸ್ಥರು ದೂರಿದ್ದಾರೆ.
ಮಾರ್ಚ್ 18ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಅರುಣ್, ಕಾಜಲ್ಗೆ ಹೆಚ್ಚಿನ ಪ್ರಮಾಣದ ಅರಿವಳಿಕೆ ಚುಚ್ಚುಮದ್ದು ನೀಡಿದ್ದಾನೆ. ಚುಚ್ಚುಮದ್ದಿನ ಪ್ರಭಾವದಿಂದ ಕಾಜಲ್ ಅವರ ಮೂಗಿನಲ್ಲಿ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕಾಜಲ್ ಮೃತಪಟ್ಟಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಅರುಣ್ ಶರ್ಮಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ರಹಸ್ಯ ಬಯಲಾಗಿದೆ.