DAKSHINA KANNADA
ವ್ಯವಸ್ಥಾಪನಾ ಸಮಿತಿಯ ಅಧಿಕ ಪ್ರಸಂಗೀತನಕ್ಕೆ ಮುನಿದನೇ ಪುತ್ತೂರು ಮಹಾಲಿಂಗೇಶ್ವರ ?
ವ್ಯವಸ್ಥಾಪನಾ ಸಮಿತಿಯ ಅಧಿಕ ಪ್ರಸಂಗೀತನಕ್ಕೆ ಮುನಿದನೇ ಪುತ್ತೂರು ಮಹಾಲಿಂಗೇಶ್ವರ ?
ಮಂಗಳೂರು, ಮಾರ್ಚ್ 6: ಹತ್ತೂರಿನ ಒಡೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ಶಿವರಾತ್ರಿಯಂದು ಭಾರೀ ಅನಾಹುತವೊಂದು ಸಂಭವಿಸಿದೆ.
ಶಿವರಾತ್ರಿ ಪ್ರಯುಕ್ತ ಉತ್ಸವ ಮೂರ್ತಿಯ ಬಲಿ ನಡೆಯುವ ಸಂದರ್ಭದಲ್ಲಿ ದೇವರನ್ನು ಹೊತ್ತ ಬ್ರಹ್ಮವಾಹಕನ ಪ್ರೀತಂ ಪುತ್ತೂರಾಯ ತಲೆಯಿಂದ ಉತ್ಸವ ಮೂರ್ತಿ ಬಿದ್ದು ಭೂ ಸ್ಪರ್ಶ ಮಾಡಿದೆ.
ಶಿವನ ಉತ್ಸವದ ದಿನದಂದೇ ಈ ರೀತಿಯ ಅಪಚಾರಕ್ಕೆ ನಡೆದಿರುವುದು ಆ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಭಕ್ತರನ್ನು ದಿಗ್ಬ್ರಮೆಗೊಳಿಸಿದೆ.
ದೇವಸ್ಥಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಸ್ವತಹ ಆರಾಧ್ಯ ಮೂರ್ತಿಯಾದ ಮಹಾಶಿವನಿಗೆ ಇಷ್ಟವಿಲ್ಲವೋ ಎನ್ನುವ ಸೂಚನೆ ಇದುವಾಗಿತ್ತೋ ಎನ್ನುವ ಗೊಂದಲಗಳು ಇದೀಗ ಭಕ್ತರಲ್ಲಿ ಮೂಡಲಾರಂಭಿಸಿದೆ.
ದೇವಸ್ಥಾನಕ್ಕೆ ಸ್ವರ್ಣ ಲೇಪಿತ ಕೊಡಿಮರವನ್ನು ಸ್ಥಾಪಿಸುವ ಕಾರಣಕ್ಕಾಗಿ ತರಾತುರಿಯಲ್ಲಿ ಹಿಂದೆ ಇದ್ದ ಕೊಡಿಮರವನ್ನು ತೆಗೆಯಲಾಗಿದೆ.
ಕೊಡಿಮರವಿಲ್ಲದೆ ಕ್ಷೇತ್ರದಲ್ಲಿ ದೇವರ ಪ್ರದಕ್ಷಿಣೆಯನ್ನು ನಡೆಸುವುದು ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಸೂಕ್ತವಲ್ಲ ಎನ್ನುವುದು ಪಂಡಿತರ ಅಭಿಪ್ರಾಯವಾಗಿದೆ.
ಅದರೆ ಶಿವರಾತ್ರಿಯನ್ನು ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಆವರಣಕ್ಕೂ ತರಲಾಗಿದ್ದು, ಇದು ಸ್ವತ ಮಹಾಲಿಂಗೇಶ್ವರನಿಗೆ ಇಷ್ಟವಾಗಲಿಲ್ಲವೋ ಎನ್ನುವ ಮಾತೂ ಕೇಳಿ ಬರಲಾರಂಭಿಸಿದೆ.
ದೇವರು ಭೂ ಸ್ಪರ್ಶ ಮಾಡಿದ ತಕ್ಷಣವೇ ಅಲ್ಲಿ ಸೇರಿದ್ದ ಕೆಲವು ಮಂದಿ ಭಕ್ತಾಧಿಗಳ ಕೈಯಲ್ಲಿದ್ದ ಮೊಬೈಲಿನಿಂದ ಆ ದೃಶ್ಯಾವಳಿಗಳನ್ನು ಅಳಿಸಿ ಹಾಕಿದ್ದಾರೆ.
ಅಲ್ಲದೆ ತರಾತುರಿಯಲ್ಲಿ ಭೂ ಸ್ಪರ್ಶ ಮಾಡಿದ ದೇವರಿಗೆ ಶುದ್ಧೀ ಕಲಶ , ಪತನಶಾಂತಿ ಹೋಮವನ್ನು ಮಾಡದೇ ಮತ್ತೆ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇಟ್ಟಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ.
ಹತ್ತೂರಿಗೆ ಸಂಬಂಧಪಟ್ಟ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಧಾರ್ಮಿಕ ವಿಧಿ ವಿಧಾನಗಳು, ಮಾರ್ಪಾಡುಗಳು ನಡೆಯಬೇಕಾದರೆ ಅದನ್ನು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಸುವ ವ್ಯವಸ್ಥೆಯಾಗಬೇಕಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ದೇವಸ್ಥಾನದ ಅರ್ಚಕರು, ವ್ಯವಸ್ಥಾನಪನ ಸಮಿತಿ ಹಾಗೂ ಇತರ ಕೆಲವು ಮಂದಿ ಸೇರಿಕೊಂಡೇ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿರುವುದೂ ಕೂಡಾ ದೇವರ ಅಸಮಾಧಾನಕ್ಕೆ ಕಾರಣವಿರಬಹುದು ಎನ್ನುವ ಲೆಕ್ಕಾಚಾರಗಳೂ ಇದೀಗ ಮೂಡಲಾರಂಭಿಸಿದೆ.
ಸ್ಮಶಾನವಾಸಿ, ಚರ್ಮದ ವಸ್ತ್ರಾಲಂಕೃತ ಮಹಾರುದ್ರನಿಗೆ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ವೈಭವವು ಇಷ್ಟವಾಗಿಲ್ಲವೋ ಎನ್ನುವ ಮಾತೂ ಕೇಳಿ ಬರುತ್ತಿದೆ.
ತಮ್ಮ ಸ್ವಪ್ರತಿಷ್ಟೆಗಾಗಿ ದೇವಸ್ಥಾನವೆನ್ನುವ ಇತಿಮಿತಿಯನ್ನು ಮೀರಿ ಚಿನ್ನದ ಕೊಡಿಮರ, ಚಿನ್ನದ ರಥ, ಚಿನ್ನದ ಕೊಡ, ಗರ್ಭಗುಡಿಗೆ ಚಿನ್ನದ ಹೊದಿಕೆಯನ್ನು ಮಾಡಿದರೆ ದೇವರಿಗೆ ಇಷ್ಟವಾಗುವುದಿಲ್ಲ ಎನ್ನುವುದನ್ನು ಮಹಾಲಿಂಗೇಶ್ವರ ದೇವಸ್ಥಾನಾದಿ ಆಡಳಿತ ವ್ಯವಸ್ಥೆಗಳು ಮನಗಾಣಬೇಕಿದೆ.
ಶಿವರಾತ್ರಿಯಂದು ನಡೆದ ಆ ಅಪಚಾರಕ್ಕೆ ಸಾರ್ವಜನಿಕರನ್ನೆಲ್ಲಾ ಸೇರಿಸಿ ಅಷ್ಟಮಂಗಲ ಪ್ರಶ್ನೆಯನ್ನು ನಡೆಸಬೇಕಿದ್ದು, ಅಷ್ಟಮಂಗಲ ಹೇಳುವ ಜೋತಿಷ್ಯಿಯ ನೇಮಕದ ವಿಚಾರವನ್ನೂ ಸಾರ್ವಜನಿಕರಿಗೆ ಬಿಡಬೇಕಿದೆ ಎನ್ನುವ ಒತ್ತಾಯವೂ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ.