ಕುಂದಾಪುರ ಫೆಬ್ರವರಿ 26: ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಿರ್ದೇಶಕ ಉಪೇಂದ್ರ ತಮ್ಮ ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರಕ್ಕೆ ಕುಟುಂಬ ಸಮೇತ ಆಗಮಿಸಿ ಟೆಂಪಲ್ ರನ್ ಮಾಡಿದ್ದಾರೆ.

ಉಪೇಂದ್ರ, ತಮ್ಮ ಪತ್ನಿ ಪ್ರಿಯಾಂಕಾ, ತಂದೆ ಮಂಜುನಾಥ್ ರಾವ್ ತಾಯಿ ಅನುಸೂಯ, ಅಣ್ಣ ಸುದೀಂದ್ರ ರಾವ್ ಮತ್ತು ಅತ್ತಿಗೆ ವೀಣಾ ಹಾಗೂ ಮಗ ಆಯುಷ್, ಅಣ್ಣನ ಮಕ್ಕಳಾದ ನಿರಂಜನ್ ಮತ್ತು ಸುದಿರ್ಶನ್ ಜೊತೆ ಹುಟ್ಟೂರಿಗೆ ಬಂದಿದ್ದಾರೆ ಉಪೇಂದ್ರ.

ಈ ಸ್ಟಾರ್ ಕುಟುಂಬ ಕುಂದಾಪುರ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದ ಪಡೆದಿದ್ದಾರೆ. ಉಪೇಂದ್ರ ಸೇರಿ ಮನೆಯ ಗಂಡ ಮಕ್ಕಳೆಲ್ಲಾ ಪಂಚೆ ಶಲ್ಯ ಧರಿಸಿ, ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಡು ಬಂದಿದ್ದಾರೆ. ನಿರಂಜನ್ ಒಂದಷ್ಟು ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟ ಉಪೇಂದ್ರ ಅವರು ಪತ್ನಿ ನಟಿ ಪ್ರಿಯಾಂಕ ಉಪೇಂದ್ರ, ಪುತ್ರ ಆಯುಷ್ ಉಪೇಂದ್ರ ಸೇರಿದಂತೆ ಕುಟುಂಬ ಸಮೇತರಾಗಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕುಲ ದೇವರಾಗಿರುವ ಸಾಲಿಗ್ರಾಮ ಗುರು ನರಸಿಂಹ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಕುಂದಾಪುರದ ಸಮುದ್ರ ತೀರದಲ್ಲಿ ಆಟವಾಡುತ್ತಾ ಕಾಲ ಕಳೆದಿದ್ದಾರೆ.
ಇನ್ನು ಪ್ರಿಯಾಂಕ ಉಪೇಂದ್ರ ಫ್ಯಾಮಿಲಿ ತಮ್ಮ ಕುಟುಂಬದ ನಾಗಸನ್ನಿಧಿಗೂ ಭೇಟಿ ನೀಡಿದ್ದಾರೆ. ಇಲ್ಲಿಗೆ ಅವರು ಪ್ರತಿವರ್ಷ ನಾಗರ ಪಂಚಮಿಯಂದು ಬಂದು ಪೂಜೆ ಸಲ್ಲಿಸುತ್ತಾರೆ. ಉಪೇಂದ್ರ ಕುಟುಂಬದ ಒಗ್ಗಟ್ಟನ್ನು ನೋಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.