ಕಾನ್ಪುರ , ಏಪ್ರಿಲ್ 19: ಪತ್ನಿಯ ಮೇಲಿನ ಸಂಶಯಕ್ಕೆ ತನ್ನ ಹನ್ನೊಂದು ವರ್ಷದ ಇಬ್ಬರು ಮುಗ್ಧ ಹೆಣ್ಣು ಮಕ್ಕಳ ಕತ್ತನ್ನು ಸೀಳಿ ಕೊಲೆ ಮಾಡಿದ ಘಟನೆ ಕಾನ್ಪುರದಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿಯನ್ನು ಮೂಲತಃ ಬಿಹಾರದವನಾದ, ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಶಶಿ ರಂಜನ್ ಮಿಶ್ರಾ ಎಂದು ಗುರುತಿಸಲಾಗಿದ್ದು, ಆರೋಪಿಯೇ ಪೊಲೀಸರಿಗೆ ಕರೆ ಮಾಡಿ ಕೊಲೆ ಬಗ್ಗೆ ಹೇಳಿದ್ದಾನೆ.

ಮೂಲತಃ ಬಿಹಾರದವನಾದ, ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಶಶಿ ರಂಜನ್ ಮಿಶ್ರಾ ಮತ್ತು ರೇಷ್ಮಾ ಛೆಟ್ರಿ 2014ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ 11 ವರ್ಷದ ಅವಳಿ ಹೆಣ್ಣು ಮಕ್ಕಳಾದ ವೃದ್ಧಿ ಮತ್ತು ಸಿದ್ದಿ ಹಾಗೂ 6 ವರ್ಷದ ಪುತ್ರನಿದ್ದಾನೆ. ಆರೋಪಿ ಶಶಿ ರಂಜನ್ ಮಿಶ್ರಾ ಪತ್ನಿಯ ಮೇಲೆ ತೀವ್ರ ಸಂಶಯ ಹೊಂದಿದ್ದಲ್ಲದೆ, ಆಕೆಯ ಪ್ರತಿಯೊಂದು ಚಲನವಲನದ ಮೇಲೆ ನಿಗಾ ಇಡಲು ಮಲಗುವ ಕೋಣೆ ಸೇರಿದಂತೆ ಮನೆಯಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ ಎನ್ನಲಾಗಿದೆ.

ಏಪ್ರಿಲ್ 18ರ ರಾತ್ರಿ ಕುಟುಂಬಸ್ಥರೆಲ್ಲ ಒಟ್ಟಿಗೆ ಊಟ ಮಾಡಿದ್ದರು. ಬಳಿಕ ಮಕ್ಕಳನ್ನು ತನ್ನ ಕೋಣೆಗೆ ಕರೆದೊಯ್ದಿದ್ದ ಆರೋಪಿ, ಬೆಳಗಿನ ಜಾವ 2:30ರ ಸುಮಾರಿಗೆ ಕೋಣೆಯ ದೀಪಗಳನ್ನು ಆಫ್ ಮಾಡಿ ಮಕ್ಕಳ ಹತ್ಯೆ ಮಾಡಿದ್ದಾನೆ. ಹರಿತವಾದ ಆಯುಧದಿಂದ ಮಕ್ಕಳ ಗಂಟಲು ಸೀಳಿದ ಬಳಿಕ, ತಾನೇ ಪೊಲೀಸರಿಗೆ ಫೋನ್ ಮಾಡಿ ಮನೆಯಲ್ಲಿ ಕೊಲೆಯಾಗಿದೆ ಎಂದು ಮಾಹಿತಿ ನೀಡಿದ್ದಾನೆ. ಪೊಲೀಸರನ್ನು ದಾರಿ ತಪ್ಪಿಸಲು ಆತ ನಡೆಸಿದ ಈ ನಾಟಕ ತನಿಖೆಯ ವೇಳೆ ಬಯಲಾಗಿದೆ.
ಪೊಲೀಸ್ ಕಮಿಷನರ್ ರಘುವೀರ್ ಲಾಲ್ ಮತ್ತು ಹಿರಿಯ ಅಧಿಕಾರಿ ದೀಪೇಂದ್ರ ನಾಥ್ ಚೌಧರಿ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ವಿಧಿವಿಜ್ಞಾನ ತಂಡವು ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ (DVR) ಮತ್ತು ಕೃತ್ಯಕ್ಕೆ ಬಳಸಿದ ಹರಿತವಾದ ಆಯುಧವನ್ನು ವಶಪಡಿಸಿಕೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಪೂರ್ವಯೋಜಿತ ಕೃತ್ಯವೆಂದು ತಿಳಿದುಬಂದಿದ್ದು, ಪತ್ನಿಗೆ ಮಾನಸಿಕ ನೋವು ನೀಡಲು ಆಕೆ ಪ್ರೀತಿಸುತ್ತಿದ್ದ ಮಕ್ಕಳನ್ನೇ ಆತ ಬಲಿಪಡೆದಿದ್ದಾನೆ ಎಂಬುದು ದೃಢಪಟ್ಟಿದೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.