Connect with us

    LATEST NEWS

    ಅವೈಜ್ಞಾನಿಕ ಕಟ್ಟಡ ಕಾಮಗಾರಿ, ಇಬ್ಬರು ಕಾರ್ಮಿಕರು ಸಾವು ಮುಂದೆ ಇನ್ನೆಷ್ಟು ?

    ಅವೈಜ್ಞಾನಿಕ ಕಟ್ಟಡ ಕಾಮಗಾರಿ, ಇಬ್ಬರು ಕಾರ್ಮಿಕರು ಸಾವು ಮುಂದೆ ಇನ್ನೆಷ್ಟು ?

    ಮಂಗಳೂರು ಫೆಬ್ರವರಿ 28: ಮಂಗಳೂರು ನಗರದ ಮಧ್ಯಭಾಗದ ಬಂಟ್ಸ್ ಹಾಸ್ಟೇಲ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಕಟ್ಟಡದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಾಮಗಾರಿ ಆರಂಭಗೊಂಡಂದಿನಿಂದ ಅವೈಜ್ಞಾನಿಕ ರೀತಿಯಲ್ಲಿ ಮಣ್ಣು ಕೊರೆಯಲು ಆರಂಭಿಸಿದ್ದ ಕಟ್ಟಡದ ಗುತ್ತಿಗೆದಾರರು ಇದೀಗ ಮಣ್ಣು ಕೊರೆದೂ ಕೊರೆದು ಇಬ್ಬರು ಕಾರ್ಮಿಕರನ್ನು ಮಣ್ಣಿನಡಿ ಹೂತು ಹಾಕಿದ್ದಾರೆ.

    ಮೆಡಿಕೇರ್ ಸೆಂಟರ್ ನ ಪಕ್ಕದಲ್ಲಿರುವ ರಸ್ತೆಯ ಬದಿಯನ್ನು ಹಾಗೂ ರಸ್ತೆಯ ಅಡಿ ಭಾಗವನ್ನು ಕೊರೆದ ಪರಿಣಾಮ ಇಂದು ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ರಸ್ತೆ ಹಾಗೂ ಮಣ್ಣು ಏಕಾಏಕಿ ಕುಸಿದು ಬಿದ್ದಿದೆ. ಕಟ್ಟಡದ ರಿಟೈನಿಂಗ್ ವಾಲ್ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರ ಮೇಲೆಯೇ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದರೆ,ಇನ್ನೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಒಟ್ಟು ಆರು ಕಾರ್ಮಿಕರು ಈ ಸಂದರ್ಭದಲ್ಲಿ ಕಾಮಗಾರಿ ನಡೆಸುತ್ತಿದ್ದು, ಮಣ್ಣು ಕುಸಿದ ತಕ್ಷಣ ಮೂವರು ಕಾರ್ಮಿಕರು ಹಾರಿ ತಪ್ಪಿಸಿಕೊಂಡಿದ್ದರು.

    ಕಾಮಗಾರಿ ಆರಂಭಗೊಂಡಾಗಲೇ ಮ್ಯಾಂಗಲೂರ್ ಮಿರರ್ ಈ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿದೆ ಎನ್ನುವ ವರದಿ ಪ್ರಕಟಿಸಿತ್ತು. ಇದೇ ರೀತಿಯಲ್ಲಿ ಕಾಮಗಾರಿ ನಡೆದಲ್ಲಿ ಜೀವ ಹಾನಿ ಸಂಭವಿಸಲಿದೆ ಎನ್ನುವ ಎಚ್ಚರಿಕೆಯನ್ನೂ ನೀಡಿತ್ತು.

    ಕಟ್ಟಡ ಕಾಮಗಾರಿಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಈ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಈ ಕಟ್ಟಡಕ್ಕೆ ಸರಿಯಾದ ಸೆಟ್ ಬ್ಯಾಕ್ ಕೂಡಾ ಇಲ್ಲವಾಗಿದೆ. ಅವಘಡಗಳೇನಾದರೂ ಸಂಭವಿಸಿದಲ್ಲಿ, ಕಟ್ಟಡಕ್ಕೆ ಸಲೀಸಾಗಿ ಅಂಬ್ಯುಲೆನ್ಸ್, ಅಗ್ನಿಶಾಮಕದಳ ವಾಹನಗಳು ಸಾಗಬೇಕಾದ ವ್ಯವಸ್ಥೆಯೂ ಈ ಕಟ್ಟಡಕ್ಕಿಲ್ಲ. ಸಿಕ್ಕ ಒಂದಿಂಚು ಜಾಗವನ್ನೂ ಬಿಡದೆ ಕಟ್ಟಡವನ್ನು ಕಟ್ಟಲಾಗುತ್ತಿದ್ದು, ಇದರ ಪರಿಣಾಮ ಇದೀಗ ಎರಡು ಅಮಾಯಕ ಜೀವಗಳು ಬಲಿಯಾಗಿದೆ.

    ಬಡಪಾಯಿ ಜನರಿಗೆ ಕೇವಲ ಮನೆ ಕಟ್ಟಲು ನೂರಾರು ಷರತ್ತು ಹಾಕುವ ಮಂಗಳೂರು ಮಹಾನಗರ ಪಾಲಿಕೆ ಎ.ಜೆ.ಶೆಟ್ಟಿ ಮಾಲಕತ್ವದ ಈ ಕಟ್ಟಡಕ್ಕೆ ಯಾವ ಷರತ್ತುಗಳೂ ಇಲ್ಲದಂತಾಗಿದೆ. ಕಟ್ಟಡದ ಒಂದು ಪಕ್ಕದಲ್ಲಿ ಇದೀಗ ಕುಸಿಯಲಾರಂಭಿಸಿದ್ದು, ಇನ್ನೊಂದು ಪಕ್ಕದ ಅವಸ್ಥೆಯೂ ಇದೇ ಆಗಿದೆ.

    ಈ ಪಕ್ಕದಲ್ಲಿ ಸಂತ ಅಲೋಶಿಯಸ್ ಶಾಲೆಯಿದ್ದು, ಇಲ್ಲಿ ಮಕ್ಕಳು ಪ್ರತೀ ದಿನ ಆಟವಾಡುತ್ತಿರುತ್ತಾರೆ. ಒಂದು ವೇಳೆ ಈ ಪಕ್ಕದ ಮಣ್ಣು ಕುಸಿತಗೊಂಡದ್ದೇ ಆದಲ್ಲಿ ಮಕ್ಕಳ ಜೀವ ಹಾನಿಯಾಗುವ ಸಾಧ್ಯತೆಯೂ ಇದೆ. ಬಿರು ಬಿಸಿಲಿನಲ್ಲೇ ಈ ರೀತಿಯ ಕುಸಿತ ಸಂಭವಿಸಿದರೆ, ಇನ್ನು ಮಳೆಗಾಲದಲ್ಲಿ ಈ ಕಟ್ಟಡದ ಪಾಡೇನು ಎನ್ನುವ ಆತಂಕ ಈಗಲೇ ಜನರನ್ನು ಕಾಡತೊಡಗಿದೆ.

    ದುಡ್ಡಿದ್ದವನಿಗೆ ಒಂದು ನ್ಯಾಯ, ಬಡಪಾಯಿಗೆ ಇನ್ನೊಂದು ನ್ಯಾಯ ಎನ್ನುವ ಅಧಿಕಾರಿ ವರ್ಗ ಇನ್ನಾದರೂ ಈ ಘಟನೆಯಿಂದ ಪಾಠ ಕಲಿಯಬೇಕಿದೆ. ತನ್ನದಲ್ಲದ ತಪ್ಪಿಗೆ ಪ್ರಾಣ ತೆತ್ತ ಇಬ್ಬರು ಬಡಪಾಯಿ ಕಾರ್ಮಿಕರ ಬಲಿಯ ಹೊಣೆ ಯಾರು ಹೊತ್ತುಕೊಳ್ಳಬೇಕು ಎನ್ನುವುದನ್ನು ಕಟ್ಟಡದ ಮಾಲಕ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಧರಿಸಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply