ಮಂಗಳೂರು: ಇಂಧನ ಸುರಕ್ಷತೆಯನ್ನು ಕಾಪಾಡುವುದರ ಜೊತೆಗೆ ಪರಿಸರ ಕಾಳಜಿ, ಸಮುದಾಯದ ಕಲ್ಯಾಣ ಹಾಗೂ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವುದು ಪೆಟ್ರೋಲಿಯಂ ಸಚಿವಾಲಯದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸೋಮವಾರ ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ ಆಯೋಜಿಸಿದ್ದ ವಾರ್ಷಿಕ 15 ದಿನಗಳ ‘ಸ್ವಚ್ಛತಾ ಪಖ್ವಾಡ-2026’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಸುರೇಶ್ ಗೋಪಿ, “ಪ್ರಧಾನಿ ನರೇಂದ್ರ ಮೋದಿ ಅವರು 11 ವರ್ಷಗಳ ಹಿಂದೆ ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಆರಂಭಿಸಿದ ‘ಸ್ವಚ್ಛತಾ ಹೀ ಸೇವಾ’ ಅಭಿಯಾನವನ್ನು ನಿರಂತರವಾಗಿ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ದೊಡ್ಡ ಜವಾಬ್ದಾರಿಯಾಗಿದೆ. ದೇಶಾದ್ಯಂತ ಹದಿನೈದು ದಿನಗಳ ಕಾಲ ಈ ಸ್ವಚ್ಛತಾ ಆಂದೋಲನ ನಡೆಯುತ್ತಿದ್ದು, ನಾನು ಸ್ವತಃ ದೇಶದ 10 ರಾಜ್ಯಗಳ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ. ಇನ್ನುಳಿದ ರಾಜ್ಯಗಳ ಜವಾಬ್ದಾರಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ವಹಿಸಿಕೊಂಡಿದ್ದಾರೆ” ಎಂದರು. ಮಂಗಳೂರಿನಲ್ಲಿ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿರುವ ರಾಮಕೃಷ್ಣ ಮಠ ಹಾಗೂ ಎಂಆರ್ಪಿಎಲ್ ಸಂಸ್ಥೆಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, “ಮಂಗಳೂರು ದೇಶದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದಾಗಿದೆ. ಇತಿಹಾಸ ಪ್ರಸಿದ್ಧ ದೇವಾಲಯಗಳ ಪುಣ್ಯಭೂಮಿಯಾಗಿರುವ ನಮ್ಮ ಮಂಗಳೂರು, ಇಡೀ ದೇಶದಲ್ಲೇ ಅತ್ಯಂತ ಸುರಕ್ಷಿತ ನಗರವಾಗಿ ಮುಂದುವರಿದಿದೆ” ಎಂದು ಹೆಮ್ಮೆಯಿಂದ ನುಡಿದರು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, 2024ರ ಲೋಕಸಭಾ ಚುನಾವಣೆ ವೇಳೆ ತ್ರಿಶೂರ್ ಕ್ಷೇತ್ರದಲ್ಲಿ ಸುರೇಶ್ ಗೋಪಿ ಅವರ ಗೆಲುವಿಗಾಗಿ ತಾವು ಉಸ್ತುವಾರಿಯಾಗಿ ಕೆಲಸ ಮಾಡಿದ್ದ ದಿನಗಳನ್ನು ನೆನಪಿಸಿಕೊಂಡರು. ಅಲ್ಲದೆ, ತಾವು ಸುರೇಶ್ ಗೋಪಿಯವರ ನಟನೆಯ ದೊಡ್ಡ ಅಭಿಮಾನಿಯಾಗಿದ್ದು, ಅವರು ನಟಿಸಿದ ಮಲಯಾಳಂನ ‘ಕಾವಲ್’ ಚಿತ್ರವನ್ನು ಐದು ಬಾರಿ ವೀಕ್ಷಿಸಿದ್ದೇನೆ ಎಂದಾಗ ಸಭೆಯಲ್ಲಿ ಚಪ್ಪಾಳೆ ವ್ಯಕ್ತವಾಯಿತು.