ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ದಿಕ್ಷಿತ್ ಪೂಜಾರಿ ಬಂಧನ

ಮಂಗಳೂರು ಅಗಸ್ಟ್ 30: ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರನೊಬ್ಬನನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ದಿಕ್ಷಿತ್ ಪೂಜಾರಿ ಎಂದು ಗುರುತಿಸಲಾಗಿದೆ. ಈತ 2013ರಲ್ಲಿ ಉದ್ಯಮಿ ವಿಜೇಂದ್ರ ಭಟ್‌ ಅವರನ್ನು ಗುಂಡಿಕ್ಕಿ ಕೊಲ್ಲಲು ಯತ್ನಿಸಿದ ಪ್ರಕರಣವೂ ಸೇರಿ 11 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬಂಧಿತ ಆರೋಪಿಯ ದಿಕ್ಷಿತ್ ಮೇಲೆ ಕೊಲೆ, ಹಲ್ಲೆ, ಗಾಂಜಾ ಪ್ರಕರಣ ಸೇರಿದಂತೆ ಶೂಟೌಟ್ ಪ್ರಕರಣ ಹಾಗೂ ಉಡುಪಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣಗಳು ದಾಖಲಾಗಿದ್ದವು.

ಬಂಧಿತ ಆರೋಪಿ ದಿಕ್ಷಿತ್ ಏಳು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ನ್ಯಾಯಾಲಯಗಳಿಂದ ವಾರೆಂಟ್‌ ಹೊರಡಿಸಲಾಗಿತ್ತು. ಶುಕ್ರವಾರ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮಂಗಳೂರು ಪೊಲೀಸ್ ಕಮಿಷನರ್ ಡಾ. ಪಿ.ಎಸ್ ಹರ್ಷ ತಿಳಿಸಿದ್ದಾರೆ.

Facebook Comments

comments