ಉಳ್ಳಾಲ, ಜೂನ್ 27: ತಾಲೂಕಿನ ನಾಟೆಕಲ್ ಬಳಿ ಪಿ.ಎ. ಕಾಲೇಜಿಗೆ ಸಂಬಂಧಿಸಿದ ಬಸ್ ಚಾಲಕನ ಅಜಾಗರೂಕತೆಯಿಂದ ಸ್ಕೂಟರ್ಗೆ ಡಿಕ್ಕಿ ಹೊಡೆದು, ನಂತರ ಪಕ್ಕದ ತೋಟಕ್ಕೆ ಬಿದ್ದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಗಳಾದ ದುರ್ಘಟನೆ ಸಂಭವಿಸಿದೆ.
ಈ ಘಟನೆಯ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಸಚಿವ ಯು.ಟಿ. ಖಾದರ್ ಅವರು, ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸಲು ಬಸ್ಸಿಗೆ ಸಂಬಂಧಿಸಿದ ಪಿ.ಎ. ಕಾಲೇಜಿನ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದು, ಆಡಳಿತ ಮಂಡಳಿ ಇದಕ್ಕೆ ಒಪ್ಪಿಗೆ ಸೂಚಿಸಿದೆ.
ಮೇಲ್ನೋಟಕ್ಕೆ ಬಸ್ ಚಾಲಕನ ಅಜಾಗರೂಕತೆಯಿಂದ ಘಟನೆ ಸಂಭವಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹಿನ್ನೆಲೆ, ಬಸ್ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಇತರ ಚಾಲಕರು ಎಚ್ಚರಿಕೆ ವಹಿಸುವಂತೆ ಆಡಳಿತ ಮಂಡಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಘಟನೆ ಸಂಭವಿಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿದ ಸಿ.ಎಂ. ರವೂಫ್, ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರ ಸೇವೆಯನ್ನು ಸಚಿವ ಯು.ಟಿ. ಖಾದರ್ ಶ್ಲಾಘಿಸಿದ್ದಾರೆ.