Connect with us

    LATEST NEWS

    ಇನ್ನೂ ಸೀಲ್ ಆಗದ ಉಳ್ಳಾಲ ಠಾಣೆ ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ್ರಾ ಪೀಡಿತರು ?!!

    ಮಂಗಳೂರು, ಜೂನ್ 29: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊರೊನಾ ಪೀಡಿತರು ಹೆಣ ಕಾಯುವ ಸ್ಥಿತಿ ಎದುರಾಗಿದೆ. ಇಂದು ಬೆಳಗ್ಗೆ ಠಾಣೆಯಲ್ಲಿ ಮತ್ತೆ ಆರು ಮಂದಿ ಸಿಬಂದಿಗೆ ಸೋಂಕು ದೃಢವಾಗಿತ್ತು, ಆಸ್ಪತ್ರೆಗೆ ದಾಖಲಾಗಲು ಕೊರೊನಾ ಸೊಂಕಿತ ಪೊಲೀಸ್ ಸಿಬ್ಬಂದಿಗಳು ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ವರೆಗೂ ಆಂಬುಲೆನ್ಸ್ ಬರುವಿಕೆಗಾಗಿ ಕಾಯ್ದು ಕುಳಿತ ಘಟನೆ ನಡೆದಿದೆ‌.‌


    ಉಳ್ಳಾಲ ಠಾಣೆಯ ಪಿಎಸ್ ಐ ಒಬ್ಬರಿಗೆ ನಾಲ್ಕು ದಿನಗಳ ಹಿಂದೆಯೇ ಪಾಸಿಟಿವ್ ಆಗಿತ್ತು. ಆನಂತ್ರ ಎಎಸ್ಐ ಸಹಿತ ಮೂವರು ಪೇದೆಗಳಿಗೆ ಸೋಂಕು ದೃಢವಾಗಿತ್ತು. ಈಗ ಮತ್ತೆ ಕೊರೊನಾ ಉಳ್ಳಾಲ ಠಾಣೆಯನ್ನು ಆವರಿಸಿದ್ದು ಮತ್ತೆ ಆರು ಮಂದಿಗೆ ಸೋಂಕು ತಗಲಿದೆ. ಇಷ್ಟಾದ್ರೂ ಠಾಣೆಯನ್ನು ಪೂರ್ತಿಯಾಗಿ ಸೀಲ್ ಡೌನ್ ಮಾಡಿಲ್ಲ. ಇಂದು ಬೆಳಗ್ಗೆ ಹತ್ತು ಗಂಟೆಗೆ ಠಾಣೆಯಲ್ಲಿದ್ದ ಆರು ಮಂದಿಗೆ ಕೊರೊನಾ ತಗಲಿದ ಮಾಹಿತಿ ಬಂದಿದ್ದರೂ, ಅವರನ್ನು ಆಸ್ಪತ್ರೆಗೆ ಒಯ್ಯುವ ಕೆಲಸ ಮಾಡಿಲ್ಲ. ಹೀಗಾಗಿ ಬೆಳಗ್ಗಿನಿಂದಲೂ ಠಾಣೆಯ ಹೊರಭಾಗದಲ್ಲಿ ಹೆಣ ಕಾಯುವ ರೀತಿ ಆಂಬುಲೆನ್ಸ್ ಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ಉಂಟಾಗಿತ್ತು.

    ಮನೆ ಅಥವಾ ಯಾವುದೇ ವಾಣಿಜ್ಯ ಕಟ್ಟಡದಲ್ಲಿ ಸೋಂಕು ಪತ್ತೆಯಾದರೆ ಆ ಜಾಗವನ್ನು ಸೀಲ್ ಡೌನ್ ಮಾಡಬೇಕು.‌ ಪೊಲೀಸ್ ಠಾಣೆಯೂ ಈ ನಿಯಮದಿಂದ ಹೊರತಾಗಿಲ್ಲ. ಬೆಂಗಳೂರಿನಲ್ಲಿ ಪೊಲೀಸ್ ಠಾಣೆ, ಕಮಿಷನರ್ ಕಚೇರಿ, ಕೋರ್ಟ್ ಕಚೇರಿಗಳೆಲ್ಲ ಒಬ್ಬರಿಗೆ ಸೋಂಕು ಆದಕೂಡಲೇ ಸೀಲ್ ಡೌನ್ ಮಾಡಲಾಗ್ತಿದೆ. ಆದರೆ, ಉಳ್ಳಾಲ ಠಾಣೆಯಲ್ಲಿ ಹತ್ತು ಮಂದಿ ಸೋಂಕು ಪೀಡಿತರಾದರೂ, ಠಾಣಾ ಕಟ್ಟಡವನ್ನು ಪೂರ್ತಿಯಾಗಿ ಸೀಲ್ ಡೌನ್ ಮಾಡಿಲ್ಲ. ಅಲ್ಲಿರುವ ಎಲ್ಲ ಸಿಬಂದಿಯನ್ನು ಕ್ವಾರಂಟೈನ್ ಮಾಡಿಸುವ ಕೆಲಸವನ್ನೂ ಮಾಡಿಲ್ಲ. ಠಾಣೆಯನ್ನು ಬಂದ್ ಮಾಡಿ, ಅಲ್ಲಿಯೇ ಹೊರಭಾಗದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ. ಇದು ಅಲ್ಲಿ‌ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಅಭದ್ರತೆ ಕಾಡುವಂತಾಗಿದೆ. ಈಗಂತೂ ಪಾಸಿಟಿವ್ ಆದವರ ಮತ್ತು ಇಲ್ಲದವರು ಒಟ್ಟಿಗೇ ಇರುವಂತಾಗಿದೆ. ಆರಕ್ಷಕರಿಗೇ ಹೀಗಾದರೆ ಜನಸಾಮಾನ್ಯರ ಗತಿಯೇನು ಎನ್ನುವ ಪ್ರಶ್ನೆ ಎದುರಾಗಿದೆ.

    ಈ ನಡುವೆ, ಉಪವಿಭಾಗದ ಡಿಸಿಪಿ ಕೋದಂಡರಾಮ್ ಬುಧವಾರದ ಬಳಿಕ ಠಾಣೆಯನ್ನು ತೆರೆದು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ್ದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಕೊರೊನಾ ಪೀಡಿತರು ದಿನ ದಿನವೂ ಅಲ್ಲಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಹೊತ್ತಲ್ಲಿ ಠಾಣೆಯನ್ನು ತೆರೆಯಬೇಕು ಎನ್ನುವುದು ಎಷ್ಟು ಸರಿ ಎಂದು ಪೊಲೀಸರು ಪ್ರಶ್ನೆ ಮಾಡುತ್ತಾರೆ. ಅಲ್ಲದೆ, ಉಳ್ಳಾಲದಲ್ಲಿ ಬದಲೀ ಪೊಲೀಸರ ನಿಯೋಜನೆ ಮಾಡಬೇಕು ಎನ್ನುವ ಆಗ್ರಹವನ್ನು ಮಾಡಿದ್ದಾರೆ.

    ಹೇಳಿ ಕೇಳಿ, ಉಳ್ಳಾಲ ಭಾಗದಲ್ಲಿ ಅತಿ ಹೆಚ್ಚು ಕೊರೊನಾ ಪೀಡಿತರು ಹೊರಬರುತ್ತಿದ್ದಾರೆ. ಇಂದು ಬೆಳಗ್ಗೆ ಉಳ್ಳಾಲ ಕೋಟೆಪುರದ ಮಹಿಳೆಯೊಬ್ಬರು ಮೃತಪಟ್ಟಿದ್ದರು.‌ ಇಂಥ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಪೊಲೀಸರ ಬಗ್ಗೆ ಇಂಥ ನಿರ್ಲಕ್ಷ್ಯ ತೋರುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಹೀಗಾದರೆ ಕೊರೊನಾ ವಾರಿಯರ್ಸ್ ಆಗಿ ಪೊಲೀಸರು ಕರ್ತವ್ಯ ನಿರ್ವಹಿಸಲು ಮುಂದೆ ಬರಬಹುದೇ ಅನ್ನುವ ಮಾತು ಕೇಳಿಬಂದಿದೆ. ಉಳ್ಳಾಲದಲ್ಲಿ ಸದ್ಯದ ಮಟ್ಟಿಗೆ ಪೊಲೀಸ್ ಕೊರೊನಾ ವಾಹಕರಾಗಿ ಬದಲಾದರೆ ಆಶ್ಚರ್ಯ ಪಡುವಂಥದ್ದಿಲ್ಲ..!

    Share Information
    Advertisement
    Click to comment

    You must be logged in to post a comment Login

    Leave a Reply