ಮಂಗಳೂರು ಎಪ್ರಿಲ್ 29: ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಡೆದಿದ್ದ ಜುಬೇರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಹೇಲ್ ಅಲಿಯಾಸ್ ಅಬ್ದುಲ್ ರಹಿಮಾನ್ಗೆ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಕಾರಾಗೃಹ ವಾಸ ಹಾಗೂ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.

2017ರ ಅಕ್ಟೋಬರ್ 4ರಂದು ಮುಕ್ಕಚೇರಿ ಮಸೀದಿ ಬಳಿ ಜುಬೇರ್ ಮೇಲೆ ತಲವಾರುಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಸಂಘಟನೆಗಳ ನಡುವಿನ ಹಳೆಯ ದ್ವೇಷವೇ ಈ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ದೃಢಪಟ್ಟಿತ್ತು. ಈ ಕೃತ್ಯದಲ್ಲಿ ಜುಬೇರ್ ರಕ್ಷಣೆಗೆ ಬಂದಿದ್ದ ಇಲಿಯಾಸ್ ಎಂಬುವರಿಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು.
ಪ್ರಕರಣದ ಇತರ ಮೂವರು ಆರೋಪಿಗಳಾದ ನಿಜಾಮುದ್ದೀನ್, ತಾಜುದ್ದೀನ್ ಮತ್ತು ಮಹಮ್ಮದ್ ಮುಸ್ತಾಫಾಗೆ 2022ರಲ್ಲೇ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ ಮುಖ್ಯ ಆರೋಪಿ ಸುಹೇಲ್ ತಲೆಮರೆಸಿಕೊಂಡಿದ್ದ ಕಾರಣ ಆತನ ವಿಚಾರಣೆ ಬಾಕಿ ಇತ್ತು. ಪೊಲೀಸರು ಸುಹೇಲ್ನನ್ನು ಬಂಧಿಸಿದ ಬಳಿಕ 24 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸುನಿತಾ ಎಸ್.ಜಿ. ಅವರು, ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 326 (ಮಾರಕಾಸ್ತ್ರ ಹಲ್ಲೆ) ಅಡಿ ಶಿಕ್ಷೆ ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ನಾರಾಯಣ ಶೇರಿಗಾರ್.ಯು ಹಾಗೂ ಮೋಹನ್ ಕುಮಾರ್.ಬಿ ವಾದಿಸಿದ್ದರು.