ಉಳ್ಳಾಲ ನವೆಂಬರ್ 14: ಉಳ್ಳಾಲ ದರ್ಗಾ ಆಡಳಿತ ಸಮಿತಿಯಿಂದ ಸದಸ್ಯತ್ವ ಕಳಕೊಂಡವರಿಂದ ದರ್ಗಾದಲ್ಲಿ ಅವ್ಯವಹಾರ ನಡೆದಿದೆಯೆಂದು ಪತ್ರಿಕಾಗೋಷ್ಠಿ ನಡೆಸಿ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಕಪ್ಪು ಚುಕ್ಕೆ ತರಲು ಯತ್ನಿಸಿರುವುದು ಖಂಡನೀಯ. ಇಂಥವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸುವುದಾಗಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಎಚ್ಚರಿಕೆ ನೀಡಿದ್ದಾರೆ.

ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಉರೂಸ್ ನಡೆಯುವವರೆಗೆ ಎರಡು ವಾರಕ್ಕೊಮ್ಮೆ ಮತ್ತು ನಂತರ ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಬೇಕೆಂದು ಉಳ್ಳಾಲ ಖಾಝಿ ಎ.ಪಿ. ಉಸ್ತಾದರ ಆದೇಶವಾಗಿದ್ದು, ದರ್ಗಾ ಸಮಿತಿ ತುರ್ತು ಸಭೆ ಸೇರಿದಂತೆ ತಿಂಗಳ ಸಭೆ, ಮಹಾಸಭೆ ನಡೆಸಿದೆ. ಸಮಿತಿಯ ಆಯವ್ಯಯಗಳ ಸಂಪೂರ್ಣ ಮಾಹಿತಿಯನ್ನು ಮಹಾಸಭೆಗಳಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದೆ. ಆದರೂ ಸಮಿತಿಯ ಮೇಲೆ ಭ್ರಷ್ಟಾಚಾರ ಮತ್ತು ಏಳು ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ದರ್ಗಾ ಸಮಿತಿ ಸದಸ್ಯತನ ಕಳೆದುಕೊಂಡ ಕೆಲವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಅವರು ಹೇಳಿದರು.
ಸಮಿತಿಯು ಮಹಾಸಭೆ ನಡೆಸಿಲ್ಲ, ಲೆಕ್ಕಪತ್ರ ಮಂಡಿಸಿಲ್ಲವೆಂಬ ಆರೋಪಗಳು ಸಂಪೂರ್ಣ ಸುಳ್ಳಾಗಿವೆ. 2023ರ ಮಾರ್ಚ್ 8 ರಂದು ದರ್ಗಾದಲ್ಲಿ ನಮ್ಮ ಸಮಿತಿ ಆಡಳಿತಕ್ಕೆ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಎರಡು ಮಹಾಸಭೆಗಳು ನಡೆದಿದ್ದು ಸಮಿತಿಯ ಆಯವ್ಯಯಗಳ ಸಂಪೂರ್ಣ ಮಾಹಿತಿಯನ್ನು ಮಹಾಸಭೆಗಳಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದೆ. ಉರೂಸ್ ಮುಗಿದ ಬಳಿಕ ಏಳು ಸಮಿತಿ ಸಭೆ ಕರೆಯಲಾಗಿದೆ. ಕಮಿಟಿಯ ಎಲ್ಲಾ ಸದಸ್ಯರಿಗೆ ಒಂದೇ ಚಿಂತನೆಯಿರಲು ಸಾಧ್ಯವಿಲ್ಲ. 99 ಶೇಕಡ ಸದಸ್ಯರು ದರ್ಗಾದ ಸೇವೆ ಮಾಡಲು ಬಂದಿರುತ್ತಾರೆ. ಕೆಲವರು ಮಾತ್ರ ಸ್ವಂತ ಉದ್ದೇಶಗಳನ್ನಿಟ್ಟು ಬಂದಿದ್ದು, ತಮ್ಮ ಉದ್ದೇಶಗಳು ಈಡೇರದಿದ್ದರೆ ಈ ರೀತಿಯಾಗಿ ಅಸಮಾಧಾನಗಳನ್ನ ಹೊರಹಾಕುತ್ತಾರೆಂದರು.
ದರ್ಗಾ ಸಮಿತಿ ಸಭೆಗೆ ಹಾಜರಾಗದೆ ಸದಸ್ಯತ್ವ ರದ್ದುಗೊಂಡವರು ದರ್ಗಾದಲ್ಲಿ ಅವ್ಯವಹಾರ ನಡೆದಿದೆಯೆಂದು ಆರೋಪಿಸಿ ರಾಜ್ಯ ವಕ್ಫ್ ಬೋರ್ಡ್, ಹೈಕೋರ್ಟ್ ಗೆ ದೂರು ನೀಡಿದ್ದರು. ಪ್ರಕರಣವು ಹೈಕೋರ್ಟ್ ನಲ್ಲಿರುವಾಗಲೇ ಸಂಶಯದ ಆಧಾರ ಮೇಲೆ ಪತ್ರಿಕಾಗೋಷ್ಠಿ ಕರೆದು ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾಕ್ಕೆ ಕಪ್ಪು ಚುಕ್ಕೆ ತರುವುದು ಖಂಡನೀಯ. ಅವರ ಹಿನ್ನಲೆ, ಅವರಿಗೆ ಯಾರ ಬೆಂಬಲ ಇದೆ ಎಂಬ ಬಗ್ಗೆ ಉಳ್ಳಾಲದ ನಾಗರಿಕರಿಗೆ ತಿಳಿದಿದೆ. ಅವರ ವಿರುದ್ಧ ಕಾನೂನು ಮೊಕದ್ದಮೆ ದಾಖಲಿಸಿ ಕಾನೂನು ಹೋರಾಟ ಮಾಡಲು ಮುಂದಾಗಿದ್ದೇವೆ ಎಂದು ಅವರು ಹೇಳಿದರು



