LATEST NEWS
ರಷ್ಯಾದ ಮೇಲೆ ಭೀಕರ ಡ್ರೋನ್ ದಾಳಿ ನಡೆಸಿದ ಉಕ್ರೇನ್ – 40ಕ್ಕೂ ಅಧಿಕ ಯುದ್ದ ವಿಮಾನ ನಾಶ – ಪರಮಾಣು ದಾಳಿ ಆತಂಕ


ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧ ಮತ್ತೆ ತಾರಕಕ್ಕೇರಿದ್ದು, ಯುದ್ಧದಲ್ಲಿ ಇದೇ ಮೊದಲ ಬಾರಿಗೆ ಅತಿ ದೊಡ್ಡ ಡ್ರೋನ್ ದಾಳಿ ನಡೆದಿದೆ. ರಷ್ಯಾದ ಸೈಬೀರಿಯಾದಲ್ಲಿರುವ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ಮೂಲಕ ಅತಿ ದೊಡ್ಡ ದಾಳಿ ಮಾಡಿರುವ ಉಕ್ರೇನ್, ರಷ್ಯಾದ 40 ಕ್ಕೂ ಅಧಿಕ ಯುದ್ಧ ವಿಮಾನಗಳನ್ನು ನಾಶ ಮಾಡಿದೆ. ದಾಳಿಯಲ್ಲಿ ನಾಶವಾದ ವಿಮಾನಗಳಲ್ಲಿ ರಷ್ಯಾದ ಪ್ರಮುಖ ಫೈಟರ್ ಜೆಟ್ ಗಳಾದ Tu-95 ಮತ್ತು Tu-22M3 ಬಾಂಬರ್‌ಗಳು ಮತ್ತು ಕನಿಷ್ಠ ಒಂದು A-50 ಸೇರಿವೆ ಎಂದು ಮೂಲಗಳು ತಿಳಿಸಿವೆ.
ಉಕ್ರೇನ್ ಪ್ರಮುಖವಾಗಿ ರಷ್ಯಾದ ಫ್ರಂಟಲೈನ್ ಬಾಂಬರ್ ಯುದ್ಧ ವಿಮಾನಗಳನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡಿದೆ. ಈ ದಾಳಿ ಬಳಿಕ ಬೆಲಾಯಾ ವಾಯುನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಉಕ್ರೇನ್ ರಷ್ಯಾದ ಸೈಬಿರಿಯಾ ಮಾತ್ರವಲ್ಲದೇ ರಷ್ಯಾದ ಇರ್ಕುಟ್ಸ್ಕ್ ಪ್ರದೇಶದ ಮಿಲಿಟರಿ ಘಟಕದ ಮೇಲೂ ಡ್ರೋನ್ ದಾಳಿ ಮಾಡಿದ್ದು, ಈ ಕುರಿತ ವೀಡಿಯೊವನ್ನು ಸಹ ರಷ್ಯಾ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಇದೀಗ ಈ ದಾಳಿ ಅಮೇರಿಕಾದ ಪರ್ಲ್ ಹಾರ್ಬರ್ ದಾಳಿಯ ರೀತಿ ಎಂದು ಹೇಳಲಾಗಿದ್ದು, ರಷ್ಯಾದ ತಿರುಗೇಟಿನ ಬಗ್ಗೆ ಇದೀಗ ವಿಶ್ವಕ್ಕೆ ಆತಂಕ ವ್ಯಕ್ತವಾಗಿದೆ. ಉಕ್ರೇನ್ ಕಂಟೈನರ್ ಲಾರಿಯೊಂದರಲ್ಲಿ ಡ್ರೋನ್ ಗಳನ್ನು ಇಟ್ಟು ರಷ್ಯಾದ ಮಿಲಿಟರಿ ಬೇಸ್ ಹತ್ತಿರದಲ್ಲೇ ಈ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

2 Comments