ಬೆಳ್ತಂಗಡಿ, ಮಾರ್ಚ್ 26: ಉಜಿರೆಯ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕನ ಮೇಲೆ ನಡೆದ ಹಲ್ಲೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಜಿರೆ ಗ್ರಾಮದ ಪೆರ್ಲ ನಿವಾಸಿ ರಮೇಶ್ ಪೂಜಾರಿ (43) ಮತ್ತು ನಡ ಗ್ರಾಮದ ಸುರ್ಯ ನಿವಾಸಿ ಗೌರವ್ ಶೆಟ್ಟಿ (25) ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳ ಪರವಾಗಿ ವಕೀಲರಾದ ಸುಬ್ರಹ್ಮಣ್ಯ ಅಗರ್ತ ಅವರು ವಾದ ಮಂಡಿಸಿದ್ದರು.

ಮಾರ್ಚ್ 11ರಂದು ರಾತ್ರಿ ಸುಮಾರು 8:30ರ ಹೊತ್ತಿಗೆ ಈ ಘಟನೆ ಸಂಭವಿಸಿತ್ತು. ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕನು ತನ್ನ ಸ್ನೇಹಿತರೊಂದಿಗೆ ಉಜಿರೆ ಜಾತ್ರೆಗೆ ತೆರಳಿದ್ದನು. ಆತನ ಸ್ನೇಹಿತರು ಜಾಯಿಂಟ್ ವೀಲ್ ಏರಿದ್ದ ಸಂದರ್ಭದಲ್ಲಿ, ಅವರ ಮೊಬೈಲ್ಗಳನ್ನು ಹಿಡಿದುಕೊಂಡು ಬಾಲಕನು ಕೆಳಗೆ ನಿಂತಿದ್ದನು. ಈ ವೇಳೆ ಅಲ್ಲಿಗೆ ಬಂದ ಗೌರವ್ ಶೆಟ್ಟಿ, ರಮೇಶ್ ಪೂಜಾರಿ ಮತ್ತು ಇತರರ ತಂಡವೊಂದು ಬಾಲಕನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಹಲ್ಲೆ ನಡೆಸುವ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದ ತಂಡವು, ಘಟನೆಯ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತ್ತು. ತಡರಾತ್ರಿ ಬಾಲಕನನ್ನು ಉಜಿರೆಯ ಬೆಳಾಲು ಕ್ರಾಸ್ ಬಳಿಯ ಸಾಯಿರಾಂ ಕಟ್ಟಡದ ಬಳಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಬಾಲಕ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು. ಇದೀಗ ನ್ಯಾಯಾಲಯವು ಇಬ್ಬರಿಗೂ ಜಾಮೀನು ನೀಡಿದೆ.