ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಕಿ ಸಹಾಯಕ್ಕೆ ನಿಂತ ಯುವಕರ ತಂಡ

ಉಡುಪಿ ಅಕ್ಟೋಬರ್ 8: ಹೊಟ್ಟೆಪಾಡಿಗಾಗಿ ಜನರು ನಾನಾ ವೇಷ ಹಾಕೋದು ಸಾಮಾನ್ಯ. ಆದರೆ ಉಡುಪಿಯ ಯುವಕರು ಬಾಲಕಿಯೊಬ್ಬಳ ಕಿಡ್ನಿಯ ಚಿಕಿತ್ಸೆಗಾಗಿ ವೇಷ ಹಾಕಿ ಧನ ಸಹಾಯ ಯಾಚಿಸುತ್ತಿದೆ. ವೇಷ ಹಾಕಿರುವುದು ಒಬ್ಬ ಯುವಕನಾದರೂ, ಅನೇಕ ಯುವಕರ ತಂಡ ಇದರ ಹಿಂದೆ ನಿಂತು ಕೆಲಸ ಮಾಡುತ್ತಿದೆ.

ಉಡುಪಿಯ ಸಾಯಿಬ್ರಕಟ್ಟೆಯ ಸಿಂಚನಾಗೆ ಈಗಿನ್ನೂ ಹದಿನೈದರ ಹರೆಯ.ಈ ಪ್ರಾಯಕ್ಕೇ ಬಾಲಕಿ ಸಿಂಚನಾಳ ಕಿಡ್ನಿಯಲ್ಲಿ ತೊಂದರೆ ಉಂಟಾಗಿದ್ದು, ಬೇರೆ ಕಿಡ್ನಿ ಕಸಿಯ ಅವಶ್ಯಕತೆ ಇದೆ. ಬಡವರ ಮನೆಯ ಈ ಬಾಲಕಿಗೆ ಲಕ್ಷಾಂತರ ರೂ ಖರ್ಚು ಮಾಡಿ ಚಿಕಿತ್ಸೆ ನೀಡುವುದು ಕಷ್ಟದ ಮಾತೇ ಸರಿ.

ಇದನ್ನು ಅರಿತ ಉಡುಪಿಯ ಯುವ ಟೈಗರ್ಸ್ ತಂಡ, ಯುವಕನೊಬ್ಬನಿಗೆ ವಿಶಿಷ್ಟ ವೇಷವೊಂದನ್ನು ಹಾಕಿಸಿ ಬಾಲಕಿಗಾಗಿ ಧನ ಸಹಾಯ ಯಾಚಿಸುತ್ತಿದೆ. ಕರಾವಳಿಯಲ್ಲಿ ಶಾರದಾ ಉತ್ಸವದ ಸಡಗರವೂ ಇರುವುದರಿಂದ ಜನ ಸಂದಣಿ ಇರುವ ಕಡೆಗಳಲ್ಲಿ ಮತ್ತು ವಾಹನ ಸವಾರರಲ್ಲಿ ಈ ತಂಡ ಧನ‌ಸಹಾಯ ಕೇಳುತ್ತಿದೆ. ಸಹೃದಯರು ಯುವಕರ ಮನವಿಗೆ ಸ್ಪಂದಿಸಿ‌ ಕೈಲಾದ ಧನ ಸಹಾಯ ಮಾಡುತ್ತಿದ್ದಾರೆ. ಈ ತಂಡ ಉಡುಪಿಯಿಂದ ಮಂಗಳೂರು ತನಕವೂ ಸಂಚರಿಸಿ ಹಣ ಸಂಗ್ರಹ ಮಾಡಿ ಸಿಂಚನಾ ಚಿಕಿತ್ಸೆಗೆ ನೀಡಲಿದೆ.