Connect with us

UDUPI

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ

ಉಡುಪಿ, ಫೆಬ್ರವರಿ 03 : ಮುಂಬರುವ ಬೇಸಿಗೆ ದಿನಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿಗೆ ವಾಡಿಕೆ ಮಳೆಯು 4,535 ಮಿ.ಮೀ. ಇದ್ದು, ವಾಸ್ತವಿಕವಾಗಿ 5261 ಮಿ.ಮೀ. ನಷ್ಟು ಮಳೆಯಾಗಿ ಶೇ.16 ರಷ್ಟು ಹೆಚ್ಚು ಮಳೆಯಾಗಿದ್ದು, ನೀರಿನ ಕೊರತೆ ಆಗುವ ಸಾಧ್ಯತೆಗಳಿಲ್ಲದಿದ್ದರೂ ಸಹ ಅಂತರ್ಜಲ ಕುಸಿತಗೊಂಡು ಜಿಲ್ಲೆಯ ಯಾವುದೇ ಗ್ರಾಮ ಹಾಗೂ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು. ಈ ಬಗ್ಗೆ ಗಮನಹರಿಸುವುದರೊಂದಿಗೆ ಹತ್ತಿರದಲ್ಲಿ ಲಭ್ಯತೆ ಇರುವ ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.

ಕಳೆದ ಸಾಲಿನಲ್ಲಿ ಉಂಟಾದ ಮನೆ ಹಾನಿ, ಮಾನವ ಜೀವ ಹಾನಿ, ಜಾನುವಾರು ಜೀವ ಹಾನಿ, ಬೆಳೆ ಹಾನಿ ಸೇರಿದಂತೆ ಮತ್ತಿತರ ಹಾನಿಯ ಪರಿಹಾರ ಹಣವನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದ ಅವರು, ಮಳೆಯಿಂದ ಹಾನಿಯಾದ ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡ ಹಾಗೂ ರಸ್ತೆ ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ತ್ವರಿತವಾಗಿ ಕಾಮಗಾರಿಗಳು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಕುರಿತು ದೂರುಗಳು ಕೇಳಿ ಬಂದಿರುವುದಿಲ್ಲ. ಒಂದು ವೇಳೆ ದೂರುಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದ ಅವರು, ಜಿಲ್ಲೆಯ ಹಲವು ಕಡೆಗಳಲ್ಲಿ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳು ಒಡೆದುಹೋಗಿರುವ ಕುರಿತು ಮಾಹಿತಿ ಕೇಳಿ ಬಂದಿರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ದುರಸ್ಥಿ ಕಾರ್ಯವನ್ನು ಕೈಗೊಳ್ಳಲು ಕ್ರಮ ವಹಿಸಬೇಕು ಎಂದರು.

ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸಾಕಷ್ಟು ಮೇವನ್ನು ದಾಸ್ತಾನು ಇಟ್ಟುಕೊಳ್ಳುವಂತೆ ತಹಶೀಲ್ದಾರರುಗಳು ನೋಡಿಕೊಳ್ಳಬೇಕು. ಏಪ್ರಿಲ್-ಮೇ ತಿಂಗಳಲ್ಲಿ ಮೇವಿನ ಕೊರತೆಯಾಗುವ ಹಿನ್ನೆಲೆ, ಈ ತಿಂಗಳ ಅಂತ್ಯದಿಂದಲೇ ಹಸಿಮೇವನ್ನು ಬೆಳೆಯಲು ಕ್ರಮವಹಿಸುವಂತೆ ಕೃಷಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಬರ ನಿರ್ವಹಣೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ, ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದ ಅವರು, ಗ್ರಾಮ ಪಂಚಾಯತ್‌ನಲ್ಲಿಯೂ ಸಹ ಟಾಸ್ಕ್ಫೋರ್ಸ್ ಸಮಿತಿಗಳನ್ನು ರಚಿಸುವುದರೊಂದಿಗೆ ಬರ ಪರಿಸ್ಥಿಯನ್ನು ನಿಭಾಯಿಸಲು ಸನ್ನದ್ದರಾಗಿರಬೇಕು ಎಂದರು.
ಅಂತರ್ಜಲ ಮಟ್ಟ ಕಡಿಮೆಯಾವುದನ್ನು ತಡೆಗಟ್ಟುವ ಸಲುವಾಗಿ ಹಾಗೂ ಸಮುದ್ರದ ಉಪ್ಪು ನೀರು ನದಿಯ ಸಿಹಿ ನೀರಿಗೆ ಸೇರದಂತೆ ಈಗಾಗಲೇ ಜಿಲ್ಲೆಯಲ್ಲಿರುವ ಎಲ್ಲಾ 666 ಕಿಂಡಿ ಆಣೆಕಟ್ಟುಗಳಿಗೆ ಹಲಗೆಗಳನ್ನು ಅಳವಡಿಸಲಾಗಿದೆ ಎಂದ ಅವರು, ಬತ್ತಿಹೋಗಿರುವ ಸರ್ಕಾರಿ ಬಾವಿಗಳಿಗೂ ಸಹ ಮಳೆ ನೀರಿನ ಕೊಯ್ಲನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು. ಮಳೆಗಾಲದಲ್ಲಿ ಪ್ರವಾಹ ಸೇರಿದಂತೆ ಮತ್ತಿತರ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಎನ್.ಡಿ.ಆರ್.ಎಫ್ ತಂಡದಿಂದ ಮಂಗಳವಾರ ಮೋಕ್ ಡ್ರಿಲ್ (ಅಣುಕು ಪ್ರದರ್ಶನ) ವನ್ನು ಉದ್ಯಾವರ ನದಿಯ ಬಳಿಯಲ್ಲಿ ಬೆಳಗ್ಗೆ 9.30 ಕ್ಕೆ ಆಯೋಜಿಸಲಾಗಿದ್ದು, ಈ ಅಣುಕು ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸುವುದರೊಂದಿಗೆ, ಸ್ವಯಂ ರಕ್ಷಣೆ ಮಾಡುವ ಕುರಿತು ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.
ಜಿಲ್ಲಾ ವಿಪತ್ತು ನಿರ್ವಹಣಾ ಕ್ರಮಕ್ಕೆ ಈಗಾಗಲೇ ಪಿ.ಡಿ ಖಾತೆಯಲ್ಲಿ 10.15 ಕೋಟಿ ರಷ್ಟು ಅನುದಾನ ಲಭ್ಯವಿದೆ. ಈಗಾಗಲೇ ತಾಲೂಕು ಮಟ್ಟದ ತಹಶೀಲ್ದಾರರ ವಿಪತ್ತು ಪಿ.ಡಿ ಖಾತೆಯಲ್ಲಿ 1.53 ಕೋಟಿ ರೂ. ಅನುದಾನ ಲಭ್ಯವಿದ್ದು, ಬರ ನಿರ್ವಹಣೆಗೆ ಯಾವುದೇ ಕೊರತೆ ಇರುವುದಿಲ್ಲ ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *