LATEST NEWS
ಉದ್ಯಾನವನ ನಿರ್ಮಾಣಕ್ಕಾಗಿ ಮರಗಳಿಗೆ ಕೊಡಲಿಯೇಟು ! ಕಾನೂನು ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತರ ಆಗ್ರಹ
ಮಣಿಪಾಲ ಡಿಸೆಂಬರ್ 15: ನೆರಳು ಕೊಡುವ ಮರಗಳಿದ್ದರೆ ಮಾತ್ರ ಉದ್ಯಾನವನ ಎಂದು ಕರೆಯುತ್ತಾರೆ. ಆದರೆ ಬುದ್ದಿವಂತರ ಜಿಲ್ಲೆಯಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿದ್ದ ಮರಗಳನ್ನೇ ಕಡಿದು ಹಾಕಲಾಗಿದೆ. ಮಣಿಪಾಲದ ಹುಡ್ಕೋ ಕಾಲೋನಿ ಸಮೀಪದ ಸರಕಾರಿ ಸ್ಥಳದಲ್ಲಿ ಉದ್ಯಾನವನ ಕಾಮಗಾರಿ ನಡೆಸಲು ಅಲ್ಲಿ ಇದ್ದ ಹತ್ತಕ್ಕೂ ಅಧಿಕ ಮರಗಳನ್ನು ಕಡಿದುರುಳಿಸುವ ಅಮಾನವೀಯ ಕೃತ್ಯ ನಡೆದಿದೆ.
ಈ ಸ್ಥಳದಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿ ನಡೆಸಲು ಮರಗಳಿಗೆ ಕೊಡಲಿ ಏಟು ನೀಡಲಾಗುತ್ತಿದೆ.ಇವೆಲ್ಲ ಸ್ಥಳೀಯರು ಗಿಡಗಳನ್ನು ನೆಟ್ಟು, ನೀರುಣಿಸಿ ಬೆಳೆಸಿದ ಮರಗಳ. ಪರಿಸರ ರಕ್ಷಿಸಿ ಎನ್ನುವ ಜಾಗೃತಿಯ ಕೂಗು ಕೇಳಿಬರುತ್ತಿರುವ ಈ ಸಮಯದಲ್ಲಿ, ಮರಗಳು ಹತ್ಯೆಗೊಳಗಾದರೂ ಆಡಳಿತ ವ್ಯವಸ್ಥೆಗಳು ಮೌನವಾಗಿರುವುದು ವಿಪರ್ಯಾಸದ ಸಂಗತಿ.
ವೃಕ್ಷಗಳ ಹತ್ಯೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಹಾಗೂ ಪರಿಸರಪ್ರೇಮಿ ಗುರುರಾಜ್ ಆಚಾರ್ಯ ಅವರು ತಿವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ,ಅರಣ್ಯ ಇಲಾಖೆ, ಪರಿಸರದ ನಾಶ ಮಾಡಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಇನ್ನು ಉಳಿದಿರುವ ಮರಗಳ ಕಟಾವಿಗೆ ತಡೆಯೊಡ್ಡಬೇಕೆಂದು ವಿನಂತಿಸಿಕೊಂಡಿದ್ದಾರೆ.