ಉಡುಪಿ, ಸೆಪ್ಟೆಂಬರ್ 2: ಮುಸುಕುಧಾರಿಗಳ ತಂಡವೊಂದು ಮನೆಗಳಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಿಕಟ್ಟೆ ಸಮೀಪ ನಡೆದಿದೆ. ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೂವರು ಮುಸುಕುಧಾರಿಗಳ ತಂಡವು ಕುಕ್ಕಿಕಟ್ಟೆ ಮುಚ್ಚಲಗೋಡು ಸಮೀಪದ ಸುಬ್ರಹ್ಮಣ್ಯ ನಗರದ ವಿಠಲ ಪೂಜಾರಿ ಎಂಬವರ ಮನೆಗೆ ನುಗ್ಗಿದ್ದು, ಅಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಸೊತ್ತಿಗಾಗಿ ಹುಡುಕಾಟ ನಡೆಸಿದೆ. ಆದರೆ ಯಾವುದೇ ಸೊತ್ತುಗಳು ಸಿಗದ ಹಿನ್ನೆಲೆಯಲ್ಲಿ ಕಳ್ಳರು ಅಲ್ಲಿಂದ ತೆರಳಿದ್ದಾರೆ.
ಮುಂದೆ ಅಲ್ಲೇ ಸಮೀಪದ ಇನ್ನೊಂದು ಮನೆಗೆ ನುಗ್ಗಲು ಯತ್ನಿಸಿದಾಗ ಮನೆಯವರು ಎಚ್ಚರಗೊಂಡು ದೀಪ ಹಾಕಿದರು. ಈ ವೇಳೆ ಕಳ್ಳರ ತಂಡ ಅಲ್ಲಿಂದ ಪರಾರಿಯಾಗಿದೆ. ಪರಿಸರದ ಸಿಸಿಟಿವಿಯೊಂದರಲ್ಲಿ ಕಳ್ಳರು ರಸ್ತೆಯಲ್ಲಿ ಮನೆಗಳನ್ನು ಗುರುತಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ. ಮಾಹಿತಿ ತಿಳಿದು ಉಡುಪಿ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



