Connect with us

LATEST NEWS

ಉಡುಪಿ ಕೃಷ್ಣ ಮಠದಲ್ಲಿ ಅನ್ನದಾನ ಸೇವೆ ಮತ್ತೆ ಆರಂಭ

ಉಡುಪಿ : ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಅನ್ನದಾನ ಸೇವೆ ಉಡುಪಿ ಕೃಷ್ಣ ಮಠದಲ್ಲಿ ಇಂದಿನಿಂದ ಆರಂಭವಾಗಿದೆ. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಭಕ್ತರಿಗೆ ಅನ್ನಪ್ರಸಾದ ಬಡಿಸಿ ಅನ್ನದಾಸೋಹಕ್ಕೆ ಮರು ಚಾಲನೆ ನೀಡಿದರು.
ಬೆಳಿಗ್ಗೆ ದೇವರಿಗೆ ಅರ್ಪಿಸಲಾಗಿದ್ದ ಹಯಗ್ರೀವ ಹಾಗೂ ಪಾಯಸವನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಬಡಿಸಲಾಯಿತು. 5,000 ಭಕ್ತರು ಭೋಜನ ಸ್ವೀಕರಿಸಿದರು ಎಂದು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದರು.


ಕೋವಿಡ್-19 ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ಮಾರ್ಚ್ 23ರಿಂದ ಅನ್ನ ಪ್ರಸಾದವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ದೇಗುಲ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ಅನ್ನದಾಸೋಹ ವ್ಯವಸ್ಥೆ ಆರಂಭಿಸಿರಲಿಲ್ಲ. ವರ್ಷಾರಂಭದಲ್ಲಿ ಉಡುಪಿಗೆ ಭೇಟಿನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಮಠದಲ್ಲಿ ಭೋಜನದ ವ್ಯವಸ್ಥೆ ಮತ್ತೆ ಆರಂಭಿಸಿರುವುದು ಭಕ್ತರಿಗೆ ಅನುಕೂಲವಾದಂತಾಗಿದೆ. ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಕೃಷ್ಣಮಠದಲ್ಲಿ ಭೋಜನದ ವ್ಯವಸ್ಥೆ ಇದೆ.