Connect with us

    LATEST NEWS

    ಉಡುಪಿ ರಜತ ಮಹೋತ್ಸವ ಕಾರ್ಯಕ್ರಮ ಹಬ್ಬದಂತೆ ಆಚರಣೆ – ಶಾಸಕ ರಘುಪತಿ ಭಟ್

    ಉಡುಪಿ, ಆಗಸ್ಟ್ 18 : ಉಡುಪಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಬ್ಬದ ರೀತಿಯಲ್ಲಿ ಆಚರಿಸುವಂತೆ ಜಿಲ್ಲೆಯ ಜನತೆ ಹಾಗೂ ಸಂಘ ಸಂಸ್ಥೆಗಳಿಗೆ ಶಾಸಕ ಕೆ.ರಘುಪತಿ ಭಟ್ ಕರೆ ನೀಡಿದರು.
    ಉಡುಪಿ ರಜತ ಉತ್ಸವ ಆಚರಣೆ ಕುರಿತು ಉಡುಪಿ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲಾ ಕೇಂದ್ರಕ್ಕೆ ಜನ ಸಾಮಾನ್ಯರು ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋಗಲು ಅನುಕೂಲವಾಗಲು ಉಡುಪಿ ಜಿಲ್ಲೆಯನ್ನು ರಚನೆ ಮಾಡಬೇಕೆಂಬ ಜನರ ಒತ್ತಾಸೆಯನ್ನು ಅರಿತು ಸರ್ಕಾರ ಉಡುಪಿ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿತ್ತು. ಪ್ರಸಕ್ತ ಮಾಹೆಯ 25 ಕ್ಕೆ 25 ವರ್ಷಗಳು ತುಂಬುತ್ತಿರುವ ಹಿನ್ನಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.


    ಜಿಲ್ಲೆಯು ಇದುವರೆಗೆ ಬೆಳದು ಬಂದಿರುವ ಹಾದಿ ಮತ್ತು ಇನ್ನೂ ಗಳಿಸಬೇಕಿರುವ ಅಭಿವೃಧ್ದಿಯ ಬಗ್ಗೆ ಅವಲೋಕನ ಮಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳು ಪೂರಕವಾಗಲಿದೆ , ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

    ವೇದಿಕೆ ಕಾರ್ಯಕ್ರಮವು ಆಗಸ್ಟ್ 25 ರಂದು ಅಜ್ಜರಕಾಡು ನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಚಿವ ಸಂಪುಂಟದ ವಿವಿಧ ಸಚಿವರುಗಳು ಸಹ ಆಗಮಿಸಲಿದ್ದಾರೆ ಎಂದರು.
    ರಜತ ಮಹೋತ್ಸವದ ಅಂಗವಾಗಿ ಉಡುಪಿಯ ಬೋರ್ಡ್ ಶಾಲೆಯಿಂದ ಅಜ್ಜರಕಾಡು ಕ್ರೀಡಾಂಗಣದವರೆಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ಆಯೋಜಿಸುವಂತೆ ತಿಳಿಸಿದ ಅವರು, ಈ ಎಲ್ಲಾ ಕಾರ್ಯಕ್ರಮಗಳ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಚಾರ ನೀಡುವಂತೆ ತಿಳಿಸಿದರು.

    ಆಗಸ್ಟ್ 24 ರಿಂದ ನೇಷನ್ ಫಸ್ಟ್ ತಂಡ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲೆಯಾದ್ಯಂತ 75 ಕಿ.ಮೀ.ಗಳ ಓಟದ ಕಾರ್ಯಕ್ರಮ ನಡೆಯಲಿದೆ ಎಂದರು. ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಗಣ್ಯರು ಸೇರಿದಂತೆ ಜಿಲ್ಲೆಯ ಆರಂಭದ ದಿನಗಳಿಂದ ಇದುವರೆಗಿನ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದರು. ಉತ್ಸವದ ಯಶಸ್ವಿ ಆಚರಣೆ ಕುರಿತು ರಚಿಸಲಾಗಿರುವ ಎಲ್ಲಾ ಸಮಿತಿಗಳು ತಮಗೆ ನೀಡಿರುವ ಜವಾಬ್ದಾರಿಗಳನ್ನು ಪರಸ್ಪರ ಸಮನ್ವಯದಿಂದ ನಿಭಾಯಿಸುವಂತೆ ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply