Connect with us

    LATEST NEWS

    ಕೃಷ್ಣಾಪುರ ಮಠದ ಪರ್ಯಾಯ ಆರಂಭ : ಸರ್ವಜ್ಞ ಪೀಠಾರೋಹಣ ಮಾಡಿದ ವಿದ್ಯಾಸಾಗರ ತೀರ್ಥ ಸ್ವಾಮೀಜಿ

    ಉಡುಪಿ ಜನವರಿ 18: ಕೊರೊನಾ ಸಂಕಷ್ಟದ ನಡುವೆಯೂ ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಕೃಷ್ಣಾಪುರ ‌ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಂಗಳವಾರ ಬೆಳಗಿನ ಜಾವ 5.52ರ ಶುಭ ಮುಹೂರ್ತದಲ್ಲಿ ಕೃಷ್ಣಮಠದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಿದರು.


    ಈ ಮೂಲಕ ಕೃಷ್ಣಾಪುರ ಮಠದ ಪರ್ಯಾಯ ಆರಂಭವಾಯಿತು. ಪರ್ಯಾಯ ಸಂಪ್ರದಾಯದಂತೆ ಮುಂಜಾನೆ 2.15ಕ್ಕೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿದ ವಿದ್ಯಾಸಾಗರ ತೀರ್ಥರು, 2.30ಕ್ಕೆ ಉಡುಪಿಯ ಜೋಡುಕಟ್ಟೆ ಪ್ರವೇಶಿಸಿ, ಪಟ್ಟದ ದೇವರಾದ ದ್ವಿಭುಜ ಕಾಳೀಯ ಮರ್ಧನ ಮೂರ್ತಿಗೆ ಪೂಜೆ ಸಲ್ಲಿಸಿ ಪರ್ಯಾಯ ಮೆರವಣಿಗೆಗೆ ಚಾಲನೆ ನೀಡಿದರು. ಅಷ್ಟಮಠಗಳ ಯತಿಗಳು ಜೇಷ್ಠತೆ ಆಧಾರದಲ್ಲಿ ಮೇನೆಯಲ್ಲಿ (ಪಲ್ಲಕ್ಕಿ) ಕುಳಿತು ಸಾಗಿದರು. ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪರ್ಯಾಯ ಮೆರವಣಿಗೆ ನಡೆಯಿತು.


    ಪರ್ಯಾಯ ಮೆರವಣಿಗೆ ರಥಬೀದಿ ಪ್ರವೇಸಿದ ಬಳಿಕ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ, ಚಂದ್ರಮೌಳೀಶ್ವರ, ಅನಂತೇಶ್ವರ ಹಾಗೂ ಮಧ್ವಾಚಾರ್ಯರ ಸನ್ನಿಧಿಯ ದರ್ಶನ ಪಡೆದರು. ನಂತರ ಕೃಷ್ಣಮಠದ ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆಯಿತು. ಬಳಿಕ ಅದಮಾರು ಮಠದ ಈಶಪ್ರಿಯ ತೀರ್ಥರಿಂದ ಮಧ್ವಾಚಾರ್ಯ ಕರಾರ್ಚಿತ ಅಕ್ಷಯ ಪಾತ್ರೆ, ಬೆಳ್ಳಿಯ ಸಟ್ಟುಗ ಹಾಗೂ ಗರ್ಭಗುಡಿಯ ಕೀಲಿಕೈ ಪಡೆದು ಸುಮುಹೂರ್ತದಲ್ಲಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಿದರು.


    ಕೃಷ್ಣಮಠದ 251ನೇ ದ್ವೈವಾರ್ಷಿಕ ಪರ್ಯಾಯ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡ ವಿದ್ಯಾಸಾಗರ ತೀರ್ಥರು ಸಂಪ್ರದಾಯದಂತೆ ಬಡಗುಮಾಳಿಗೆಯ ಅರಳು ಗದ್ದುಗೆಯಲ್ಲಿ ಕುಳಿತು ಅಷ್ಟಮಠಗಳ ಯತಿಗಳಿಗೆ ಗಂಧಾದ್ಯುಪಚಾರ ಮಾಡಿ, ಪಟ್ಟ ಕಾಣಿಕೆ ಸಲ್ಲಿಸಿದರು. ಮಾಲಿಕೆ ಮಂಗಳಾರತಿ ನೆರವೇರಿತು. ನಂತರ ರಾಜಾಂಗಣದಲ್ಲಿ ಎಲ್ಲ ಮಠಾಧೀಶರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪರ್ಯಾಯ ದರ್ಬಾರ್ ನಡೆಯಿತು.

    Share Information
    Advertisement
    Click to comment

    You must be logged in to post a comment Login

    Leave a Reply