Connect with us

    LATEST NEWS

    ಕೊರಗ ಸಮುದಾಯವನ್ನು ಸದೃಢಗೊಳಿಸಬೇಕು : ಶಾಸಕ ರಘುಪತಿ ಭಟ್

    ಉಡುಪಿ, ಫೆಬ್ರವರಿ 26 : ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದವಲ್ಲಿ ಆತ್ಮ ವಿಶ್ವಾಸ ಮೂಡಿಸಿ,ಅವರನ್ನು ಇತರ ಸಮುದಾಯಗಳೊಂದಿಗೆ ಮುಕ್ತವಾಗಿ ಬೆರೆಯಲು ಮಾನಸಿಕವಾಗಿ ಸದೃಢಗೊಳಿಸಲು ಎಲ್ಲಾ ಸಮುದಾಯದವರೂ ಪ್ರಯತ್ನಿಸಬೇಕು, ಕೊರದ ಸಮುದಾಯದ ಜನತೆಯೂ ಸಹ ಶಿಕ್ಷಣವಂತರಾಗಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ನಗರಸಭೆ ಹಾಗೂ ಕೊರಗ ಸಂಘಟನೆಗಳ ಸಹಯೋಗದೊಂದಿಗೆ, ಪುತ್ತೂರು ನಲ್ಲಿ 3 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಆದಿವಾಸಿ ಸಮುದಾಯ ಭವನ ವನ್ನು ಉದ್ಘಾಟಿಸಿ ಮಾತನಾಡಿದರು.  ಕೊರಗ ಸಮುದಾಯದವರು ತಾವು ಹಿಂದೆ ಅನುಭವಿಸಿದ ಶೋಷಣೆ ಮತ್ತು ಅದರಿಂದ ತಮ್ಮಲ್ಲಿ ಉಂಟಾಗಿರುವ ಕೀಳಿರಿಮೆಯನ್ನು ತೊರೆಯಲು ಶಿಕ್ಷಣದಿಂದ ಸಾಧ್ಯ, ಶಿಕ್ಷಣ ಪಡೆಯುವುದರಿಂದ ಮಾನಸಿಕವಾಗಿ ಸದೃಡರಾಗಲು ಸಾಧ್ಯವಿದ್ದು, ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸಬೇಕು. ಇತರೆ ಸಮುದಾಯದವರೂ ಸಹ ಕೊರಗ ಸಮುದಾಯದ ಸಮಗ್ರ ಅಭಿವೃಧ್ದಿಗೆ ಹಾಗೂ ಅವರು ಸಮಾಜದಲ್ಲಿ ಇತರೆ ವರ್ಗದೊಂದಿಗೆ ಮುಕ್ತವಾಗಿ ಬೆರೆಯುವ ವಾತಾವರಣ ನಿರ್ಮಿಸಲು ಸರ್ವ ರೀತಿಯಲ್ಲೂ ಸಹಕಾರ ನೀಡಬೇಕು ಎಂದರು.

    ಪ್ರಸ್ತುತ ನಿರ್ಮಿಸಿರುವ ಸಮುದಾಯ ಭವನವು ಕೊರಗ ಸಮುದಾಯದ ಆತ್ಮ ವಿಶ್ವಾಸದ ಸಂಕೇತವಾಗಿದ್ದು, ಈ ಭವನದಲ್ಲಿ ಸಭೆಗಳು, ಚರ್ಚೆಗಳು, ವಿಚಾರಗೋಷ್ಠಿಗಳು ನಡೆಯಲು ಅನುಕೂಲವಾಗುವಂತೆ ಸೂಕ್ತ ವ್ಯವಸ್ಥೆಗಳು ಮತ್ತು ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.  ಇದೇ ಸಂದರ್ಭದಲ್ಲಿ ಕೊರಗ ಸಮುದಾಯದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನದ ಚೆಕ್ ಗಳನ್ನು ಶಾಸಕರು ವಿತರಿಸಿದರು.

     

    ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕೊರಗ ಸಮುದಾಯದ ಅನೇಕರಿಗೆ ಇನ್ನೂ ಉಚಿತ ಭೂಮಿ ದೊರೆತಿಲ್ಲ ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಸೂಕ್ತ ಸ್ಥಳ ಗುರುತಿಸಿ ಜಾಗ ನೀಡಬೇಕು, ಪ.ಜಾತಿ ಮತ್ತು ಪ.ವರ್ಗದಲ್ಲಿ ಅತ್ಯಂತ ಹಿಂದುಳಿದಿರುವ ಈ ಸಮಾಜವು ಶಿಕ್ಷಣ ಮತ್ತು ಉದ್ಯೋಗದಲ್ಲಿ ತುಂಬಾ ಹಿಂದುಳಿದಿದ್ದು, ಈ ಕ್ಷೇತ್ರಗಳಲ್ಲಿ ಇವರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸುವ ಅಗತ್ಯವಿದ್ದು, ಉಳಿದ ಸಮುದಾಯಗಳೂ ಇವರ ಅಭಿವೃಧ್ದಿಗೆ ಕೈಜೋಡಿಸಬೇಕು ಎಂದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಮಾತನಾಡಿ, ಕೊರಗ ಸಮುದಾಯದವರು ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡಬೇಕು, ಜಿಲ್ಲೆಯಲ್ಲಿ ಆಶ್ರಮಶಾಲೆಗಳಲ್ಲಿ ಉಚಿತ ಊಟ ವಸತಿಯೊಂದಿಗೆ ಉತ್ತಮ ಶಿಕ್ಷಣ ಸೌಲಭ್ಯಗಳಿದ್ದು, ತಮ್ಮ ಮಕ್ಕಳನ್ನು ಅಲ್ಲಿಗೆ ಸೇರ್ಪಡೆ ಮಾಡಬೇಕು, ಸಮುದಾಯದ ಸಮಗ್ರ ಅಧ್ಯಯನ ಕುರಿತಂತೆ ಸಮೀಕ್ಷೆ ನಡೆಸಲಾಗುತ್ತಿದ್ದು, ಇವರ ಸಮಗ್ರ ಶ್ರೇಯೋಭಿವೃದ್ದಿಗೆ ಜಿಲ್ಲಾಡಳಿತ ಬದ್ದವಾಗಿದ್ದು, ಜನತೆ ಶಿಕ್ಷಣವಂತರಾಗಿ ಮತ್ತು ಜಾಗೃತರಾಗಿ ತಮಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

     

    Share Information
    Advertisement
    Click to comment

    You must be logged in to post a comment Login

    Leave a Reply