ಶೋಭಾ ಕರಂದ್ಲಾಜೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಬಹುತೇಕ ಖಚಿತ

ಪುತ್ತೂರು ಮಾರ್ಚ್ 20: ಸ್ಪಪಕ್ಷೀಯರಿಂದಲೇ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಮರಳಿ ಪಡೆಯಲು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಯಶಸ್ವಿಯಾಗಿದ್ದಾರೆ.

ರಾಜ್ಯ ಬಿಜೆಪಿ ಹಾಗೂ ಜಿಲ್ಲಾ ಬಿಜೆಪಿ ಘಟಕಗಳು ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ ಮೂಲಕ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿತ್ತು.

ರಾಜ್ಯ ಘಟಕದಲ್ಲಿ ಸ್ಪರ್ಧೆ ಖಚಿತ ಪಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಟಿಕೆಟ್ ಕದನ ದೆಹಲಿಗೆ ಶಿಫ್ಟ್ ಆಗಿತ್ತು. ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ ಚಿಕ್ಕಮಗಳೂರಿನಲ್ಲಿ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧೆಗೆ ಗ್ರಿನ್ ಸಿಗ್ನಲ್ ಸಿಕ್ಕ ಹಿನ್ನಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಇಂದು ತನ್ನ ಹುಟ್ಟೂರಿನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪ್ರತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವ ಮೊದಲು ಶೋಭಾ ತನ್ನ ಹುಟ್ಟೂರಾದ ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ನಂತರವೇ ನಾಮಪತ್ರ ಸಲ್ಲಿಸುವುದು ಹಿಂದಿನಿಂದಲೂ ಪಾಲಿಸಿಕೊಂಡು ಬಂದ ವಾಡಿಕೆ.
ಇಂದು ಬೆಳಿಗ್ಗೆ 7 ಗಂಟೆಯ ಪೂಜೆಯ ಸಮಯಕ್ಕೆ ಶೋಭಾ ಕರಂದ್ಲಾಜೆ ತನ್ನ ತಾಯಿ ಪೂವಕ್ಕ, ಸಹೋದರ ಲಕ್ಷ್ಮಣ ಕರಂದ್ಲಾಜೆ ಸಹಿತ ಹಲವು ಬಿಜೆಪಿ ಕಾರ್ಯಕರ್ತರೊಂದಿಗೆ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು.

ನಂತರ ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ , ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಪ್ರಾರ್ಥನೆ ಸಲ್ಲಿಸಿದರು.
ಮಾರ್ಚ್ 26 ರಂದು ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಸಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದ್ದು. ಈ ಮೂಲಕ ಉಡುಪಿ ಟಿಕೆಟ್ ಕದನಕ್ಕೆ ತೆರೆ ಬಿದ್ದಿದೆ.

Facebook Comments

comments