ಮಲ್ಪೆ, ಫೆಬ್ರವರಿ 17: ದೇಶದ ಭದ್ರತೆಗೆ ಸಂಬಂಧಿಸಿದ ಅತ್ಯಂತ ರಹಸ್ಯ ಮಾಹಿತಿಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇರಳದ ವಯನಾಡಿನಲ್ಲಿ ಪಶ್ಚಿಮ ಬಂಗಾಳದ ನುಸುಳುಕೋರನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಶ್ಚಿಮ ಬಂಗಾಲ ಮೂಲದ ಪ್ರಸ್ತುತ ಕೇರಳ ರಾಜ್ಯದ ಇಡುಕಿ ಜಿಲ್ಲೆಯ ಮರಾಯು ಗ್ರಾಮದ ಆಲಿಫ್ ಇಸ್ಲಾಮ್(21) ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಈ ಹಿಂದೆ 2025ರ ಡಿಸೆಂಬರ್ 21ರಂದು ಗುಜರಾತ್ ರಾಜ್ಯದ ಹೀರೇಂದ್ರ ಕುಮಾರ್ (34) ಹಾಗೂ 2025ರ ನವೆಂಬರ್ 21ರಂದು ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಬಂಧಿಸಲಾಗಿತ್ತು.
ಇವರು ಭಾರತೀಯ ನೌಕಾಪಡೆಯ ಹಡಗುಗಳ ನಿರ್ಮಾಣದ ಗುಪ್ತ ನಕ್ಷೆ ಹಾಗೂ ತಾಂತ್ರಿಕ ವಿವರಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಿಗೆ ರವಾನಿಸುತ್ತಿದ್ದರು ಎಂಬ ಆರೋಪವಿತ್ತು. ಈ ಇಬ್ಬರು ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಲಭಿಸಿದ ಖಚಿತ ಸುಳಿವಿನ ಆಧಾರದ ಮೇಲೆ ಪೊಲೀಸರು ಈಗ ಮೂರನೇ ಆರೋಪಿಯನ್ನು ಜಾಲ ಬೀಸಿ ಹಿಡಿದಿದ್ದಾರೆ.
ಬಂಧಿತ ವ್ಯಕ್ತಿಯು ಅಕ್ರಮವಾಗಿ ಭಾರತಕ್ಕೆ ನುಸುಳಿ, ನಕಲಿ ದಾಖಲೆಗಳ ಮೂಲಕ ವಯನಾಡಿನಲ್ಲಿ ನೆಲೆಸಿದ್ದ ಎನ್ನಲಾಗಿದೆ. ಈತ ಶಿಪ್‌ಯಾರ್ಡ್ ನೌಕರರು ಮತ್ತು ಪಾಕಿಸ್ತಾನದ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದನೇ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಉಡುಪಿಗೆ ಕರೆತರಲಾಗುತ್ತಿದೆ. ಬಂಧಿತ ಆರೋಪಿ ಆಲಿಫ್ ಇಸ್ಲಾಮ್ ಬಾಂಗ್ಲಾದೇಶದ ಪ್ರಜೆ ಎಂಬ ಅನುಮಾನ ಇದ್ದು, ಈ ವಿಚಾರ ದೃಢಪಟ್ಟ ನಂತರ ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.



