ಉಡುಪಿ, ಜೂನ್ 22: ಬ್ರಹ್ಮಾವರ ಕೋಡಿ ಕನ್ಯಾನ ನಿವಾಸಿ ಶ್ರೀಮತಿ ವೀಣಾ ಕಾಂಚನ್ ಅವರು ತಮ್ಮ ಮಗ ಚರಣ್ ಕಾಂಚನ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ತಮ್ಮ ಮಗ ಹೊಂದಿದ್ದ ಕಡ್ಡಾಯ ವೈಯಕ್ತಿಕ ವಿಮಾ ಪಾಲಿಸಿ ಅಡಿಯಲ್ಲಿ ವಿಮಾ ಪರಿಹಾರ ಮೊತ್ತವನ್ನು ಪಡೆಯಲು ಅಗತ್ಯ ದಾಖಲೆಗಳೊಂದಿಗೆ ಕ್ಲೈಮ್ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ವಿಮಾ ಕಂಪನಿಯು ಯಾವುದೇ ಸಮಂಜಸ ಕಾರಣವಿಲ್ಲದೆ ಕ್ಲೈಮ್ ಮೊತ್ತವನ್ನು ಬಿಡುಗಡೆ ಮಾಡದೆ ವಿಳಂಬ ಮಾಡಿತು.
ಇದರಿಂದ ನೊಂದ ಗ್ರಾಹಕರು ವಕೀಲರ ಮೂಲಕ ನೋಟಿಸ್ ನೀಡಿದರೂ ಸಹ ವಿಮಾ ಕಂಪನಿಯು ಪರಿಹಾರ ಮೊತ್ತವನ್ನು ಪಾವತಿಸದ ಕಾರಣ, ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಯಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ, ವಿಮಾ ಕಂಪನಿಯು ಹೆಚ್ಚುವರಿ ದಾಖಲೆಗಳಾದ ಎಂಎಲ್ಸಿ (MLC) ಚಿಕಿತ್ಸೆ ವರದಿಯನ್ನು ಅನಗತ್ಯವಾಗಿ ಕೇಳಿದ್ದು, ಅದರ ಅಗತ್ಯವನ್ನು ಸಮರ್ಥಿಸದೆ ಕ್ಲೈಮ್ ಮೊತ್ತವನ್ನು ತಡೆಹಿಡಿದಿರುವುದು ಸೇವಾ ನ್ಯೂನತೆ ಹಾಗೂ ಅನ್ಯಾಯ ವ್ಯಾಪಾರ ಪದ್ಧತಿ ಎಂದು ಅಭಿಪ್ರಾಯಪಟ್ಟಿತು.
ಹೀಗಾಗಿ, ಅರ್ಜಿದಾರರ ದೂರನ್ನು ಪುರಸ್ಕರಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು, ರೂ.15,00,000/- (ಹದಿನೈದು ಲಕ್ಷ) ಮೊತ್ತವನ್ನು 23-11-2024ರಿಂದ ವಾರ್ಷಿಕ 9% ಬಡ್ಡಿ ಸಹಿತ ಪಾವತಿಸಬೇಕು ಎಂದು ಆದೇಶಿಸಿತು. ಅಲ್ಲದೆ ರೂ.25,000/- ಪರಿಹಾರ ಹಾಗೂ ರೂ.10,000/- ವ್ಯಾಜ್ಯ ವೆಚ್ಚವನ್ನು ಸಹ 18-05-2026ರ ಆದೇಶದ ದಿನಾಂಕದಿಂದ 45 ದಿನಗಳೊಳಗೆ ಪಾವತಿಸುವಂತೆ ನಿರ್ದೇಶಿಸಿದೆ.
ಈ ಆದೇಶವನ್ನು ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ಸುನೀಲ್ ಟಿ. ಮಾಸರಡ್ಡಿ ಹಾಗೂ ಸದಸ್ಯೆ ಸುಜಾತ ಬಿ. ಕೊರಳ್ಳಿ ಅವರನ್ನೊಳಗೊಂಡ ನ್ಯಾಯಪೀಠ ನೀಡಿದೆ.
ದೂರುದಾರರ ಪರವಾಗಿ ವಕೀಲರಾದ ವಿವೇಕಾನಂದ ಮಲ್ಯ ಕಾಕ೯ಳ ಹಾಗೂ ಪ್ರವೀಣ್ ಎಂ. ಪೂಜಾರಿ, ಮಲ್ಪೆ ವಾದ ಮಂಡಿಸಿದರು.