Connect with us

LATEST NEWS

ಲೋಕಸಭಾ ಚುನಾವಣೆ ಉಡುಪಿ ಜಿಲ್ಲಾಡಳಿತ ಸಂಪೂರ್ಣ ಸಜ್ಜು – ಜಿಲ್ಲಾಧಿಕಾರಿ ಹೆಪ್ಸಿಬಾ

ಲೋಕಸಭಾ ಚುನಾವಣೆ ಉಡುಪಿ ಜಿಲ್ಲಾಡಳಿತ ಸಂಪೂರ್ಣ ಸಜ್ಜು – ಜಿಲ್ಲಾಧಿಕಾರಿ ಹೆಪ್ಸಿಬಾ

ಉಡುಪಿ ಎಪ್ರಿಲ್ 16: ಏಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು, ಮತದಾನವು ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲು ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಮತದಾನ ಕರ್ತವ್ಯಕ್ಕಾಗಿ 206 ಮೈಕ್ರೋ ಅಬ್ಸರ್ವರ್ ಸೇರಿದಂತೆ 6489 ಸಿಬ್ಬಂದಿ ನೇಮಿಸಿದ್ದು, ಮತದಾರರಿಗೆ 99.5% ಮತದಾರರ ವಿವರವಿರುವ ವೋಟರ್ ಸ್ಲಿಪ್ ಗಳನ್ನು ವಿತರಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗಾಗಿ ಜಿಪಿಎಸ್ ಅಳವಡಿಸಿರುವ 244 ವಾಹನಗಳನ್ನು ವ್ಯವಸ್ಥೆ ಮಾಡಿದೆ. ಮತಯಂತ್ರಗಳನ್ನು ವಿಧಾನಸಭಾ ಕ್ಷೆತ್ರದ ಭದ್ರತಾ ಕೊಠಡಿಯಿಂದ, ಮತ ಎಣಿಕಾ ಕೇಂದ್ರವಾದ ಸೈಂಟ್ ಸಿಸಿಲಿಸ್ ಶಿಕ್ಷಣ ಸಂಸ್ಥೆಯ ಮತ ಎಣಿಕಾ ಕೇಂದ್ರಕ್ಕೆ ತರುವ ಕಂಟೈನರ್ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಸೂಕ್ತ ಭದ್ರತಾ ಬೆಂಗಾವಲಿನಲ್ಲಿ ಭದ್ರತಾ ಕೊಠಡಿಗೆ ತರಲಾಗುವುದು ಎಂದು ಡಿಸಿ ಹೇಳಿದರು.

ಮತದಾನಕ್ಕಾಗಿ ಜಿಲ್ಲೆಗೆ ಒದಗಿಸಲಾಗಿರುವ ಎಲ್ಲಾ ಎವಿಎಂ ಮತ್ತು ವಿವಿ ಪ್ಯಾಟ್ ಗಳನ್ನು ಪರೀಕ್ಷಿಸಲಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾಹಿತಿ ನೀಡಿ, ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಪತ್ರಗಳ ಜೋಡಣೆ ಕಾರ್ಯ ನಡೆಸಲಾಗಿದೆ. 1379 ಬ್ಯಾಲೆಟ್ ಯೂನಿಟ್, 1280 ಕಂಟ್ರೋಲ್ ಯೂನಿಟ್ ಮತ್ತು 1477 ವಿವಿ ಪ್ಯಾಟ್ ಗಳನ್ನು ಉಪಯೋಗಿಸಲಾಗುತ್ತಿದೆ, ಮತಯಂತ್ರಗಳ ನಿರ್ವಹಣೆಗೆ ಪ್ರತಿ ವಿಧಾನಸಭಾ ಕ್ಷೆತ್ರಕ್ಕೆ 2 ಬಿ.ಇ.ಎಲ್ ಇಂಜಿನಿಯರ್ ಗಳನ್ನು ನಿಯೋಜಿಸಲಾಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಪ್ತಿಯ 54 ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದ್ದು, 15 ಮತಗಟ್ಟೆಗಳಿಗೆ ವೀಡಿಯೋ ಗ್ರಾಫರ್, 21 ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿ ನೇಮಿಸಲಾಗಿದೆ.

ಜಿಲ್ಲೆಯಲ್ಲಿ 25 ಸಖೀ ಮತಗಟ್ಟೆ , 2 ವಿಶೇಷಚೇತನ ಮತಗಟ್ಟೆ, 1 ಎಥ್ನಿಕ್ ಬೂತ್ ತೆರೆಯಲಾಗುವುದು, ವಿಶೇಷಚೇತನ ಮತದಾರರಿಗೆ ಗಾಲಿಕುರ್ಚಿ, ಬೂತ ಕನ್ನಡಿ, ಬ್ರೈಲ್ ಮಾದರಿ ಮತಪತ್ರ, ಆದ್ಯತೆ ಮೇಲೆ ಪ್ರವೇಶ, ರ್ಯಾಂಪ್ ಮತ್ತು ಕೋರಿಕೆ ಮೇರೆಗೆ ವಾಹನ ವ್ಯವಸ್ಥೆ ಒದಗಿಸಲಾಗುವುದು.

ಚುನಾವಣ ಕರ್ತವ್ಯದಲ್ಲಿರುವ ಅಧಿಕಾರಿ/ಸಿಬ್ಬಂದಿ, ಪೊಲೀಸ್/ ವಾಹನ ಚಾಲಕರಿಗೆ ಒಟ್ಟು 584 ಅಂಚೆ ಮತಪತ್ರ ಮತ್ತು 3619 ಇ.ಡಿಸಿ ವಿತರಿಸಲಾಗಿದ್ದು, 575 ಸೇವಾ ಮತದಾರರಿಗೆ ಇಟಿಪಿಬಿಎಸ್ ಮೂಲಕ ಅಂಚೆಮತಪತ್ರ ಕಳುಹಿಸಲಾಗಿದೆ.

ಚುನಾವಣಾ ವೆಚ್ಚ ವೀಕ್ಷಕರ ಮಾರ್ಗದರ್ಶನದಲ್ಲಿ , ಚುನಾವಣ ಅಭ್ಯರ್ಥಿಗಳ ಖರ್ಚು ವೆಚ್ಚಗಳ ವಹಿಯನ್ನು 3 ಬಾರಿ ಪರಿಶೀಲಿಸಲಾಗಿದೆ, ಮತದಾನಕ್ಕೆ 72 ಗಂಟೆ ಮುಂಚೆ, 48 ಗಂಟೆ ಮುಂಚೆ, 24 ಗಂಟೆ ಮುಂಚೆ ಮತ್ತು ಮತದಾನದ ದಿನದಂದು ನಿರ್ವಹಿಸಬೇಕಾದ ಮತ್ತು ನಿರ್ವಹಿಸಬಾರದ ಕಾರ್ಯಗಳ ಕುರಿತು ಮಾಹಿತಿ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡದಂತೆ ತಿಳಿಸಲಾಗಿದೆ.
ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಇದುವರೆಗೆ 25,30,910 ನಗದು ಜಫ್ತಿ ಮಾಡಿದ್ದು, ಈ ಪೈಕಿ ದಾಖಲೆಯ ಪರಿಶೀಲನೆಯ ನಂತರ 23,50,920 ಹಿಂತಿರುಗಿಸಲಾಗಿದೆ, ಅಬಕಾರಿ ಇಲಾಖೆಯಿಂದ 15853.69 ಲೀ ಮದ್ಯ ವಶಪಡಿಸಿಕೊಂಡಿದು, ಇದರ ಮೌಲ್ಯ 64,38,722 ಹಾಗೂ 3 ಟ್ರಕ್ ಹಾಗೂ 4 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ರಚಿಸಲಾಗಿರುವ , ಪ್ಲೈಯಿಂಗ್ ಸ್ವ್ಕಾಡ್, ಸೆಕ್ಟರ್ ಅಧಿಕಾರಿ ಮತ್ತು ಇತರೆ ತಂಡಗಳಿಗೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ಚುನಾವಣಾ ಅಕ್ರಮಗಳು , ಮತದಾರರಿಗೆ ಆಮಿಷವೊಡ್ಡಿ ಸೆಳೆಯುವ ಯತ್ನಗಳು ನಡೆಯುವ ಸಾಧ್ಯತೆಯಿರುವುದರಿಂದ , ಯಾವುದೇ ಸಂಶಯಾತ್ಮಕ ಚಟುವಟಿಕೆ ಕಂಡುಬಂದಲ್ಲಿ ಪರಿಶೀಲಿಸಿ ಕೂಡಲೇ ಕ್ರಮ ಜರುಗಿಸಲು ಸೂಚಿಸಿದೆ, ಮತದಾನದ ದಿನ ಯಾವುದೇ ಅಕ್ರಮ ಕಂಡುಬಂದಲ್ಲಿ ಸೀವಜಿಲ್ ಮೂಲಕ ಅಥವಾ ಸಹಾಯವಾಣಿ ಸಂಖ್ಯೆ 1950 ಗೆ ದೂರು ನೀಡುವಂತೆ ಡಿಸಿ ತಿಳಿಸಿದರು.

ಎಸ್ಪಿ ನಿಶಾ ಜೇಮ್ಸ್ ಮಾತನಾಡಿ, ಜಿಲ್ಲೆಯ 865 ಮತಗಟ್ಟೆಗಳಲ್ಲಿ 180 ಸೂಕ್ಷ್ಮ ಎಂದು ಗುರುತಿಸಲಾಗಿದ್ದು, 685 ಸಾಮಾನ್ಯ ಮತಗಟ್ಟೆಗಳಾಗಿವೆ, 36 ನಕ್ಸಲ್ ಪೀಡಿತ ಮತಗಟ್ಟೆಗಳಿದ್ದು, ಈ ಪ್ರದೇಶದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಚುನಾವಣಾ ಕರ್ತವ್ಯಕ್ಕೆ ಪೊಲೀಸ್ ಸಿಬ್ಬಂದಿಯೊಂದಿಗೆ, ಕಾರಾಗೃಹ ಇಲಾಖೆ, ಹೋಂ ಗಾಡ್ ್ , ಫಾರೆಸ್ಟ್ ಗಾರ್ಡ್‍ಗಳು, 4 ಕೆ.ಎಸ್.ಆರ್.ಪಿ ತುಕಡಿ ಹಾಗೂ 2 ಐ.ಟಿ.ಡಿ.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ 8 ಬಾರಿ ಜಂಟಿ ಕೊಂಬಿಂಗ್ ನಡೆಸಲಾಗಿದೆ, ಹಾಗೂ ಪಥ ಸಂಚಲನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಭದ್ರತೆ ಮೂಡಿಸಲಾಗಿದೆ, ಚುನಾವಣಗೆ ಅಡ್ಡಿಪಡಿಸುವಂತಹ 148 ಮಂದಿಯನ್ನು ಗುರುತಿಸಿದ್ದು, 127 ಜನರಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ, 1324 ರೌಡಿ ಶೀಟರ್ ಗಳಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ, 3696 ಮಂದಿಯಿಂದ ಶಸ್ತಾಸ್ತ್ರ ಠೇವಣಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Facebook Comments

comments